ಪಾಟ್ನಾ: ಸರ್ಕಾರವು ಅತ್ಯಂತ ಕಡಿಮೆ ಬೆಲೆಗೆ ವಿದ್ಯುತ್ ನೀಡುತ್ತಿರುವುದರಿಂದ ರಾಜ್ಯದಲ್ಲಿ ವಿದ್ಯುತ್ ಉಚಿತವಾಗಿ ನೀಡಲು ಸಾಧ್ಯವಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ.
ಬಜೆಟ್ ಅಧಿವೇಶನದ ವೇಳೆ ಮಾತನಾಡಿದ ಸಿಎಂ ನಿತೀಶ್, ಬಿಹಾರದಲ್ಲಿ ಉಚಿತವಾಗಿ ವಿದ್ಯುತ್ ನೀಡುವುದಾಗಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಉಚಿತವಾಗಿ ನೀಡುವುದಿಲ್ಲ ಎಂದು ನಾನು ಮೊದಲಿನಿಂದಲೂ ಹೇಳುತ್ತಲೇ ಇದ್ದೇನೆ, ನಾವು ರಾಜ್ಯದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ವಿದ್ಯುತ್ ಒದಗಿಸುತ್ತಿದ್ದೇವೆ.
ವಿದ್ಯುತ್ ಅಡೆ ತಡೆ ಇಲ್ಲದಂತೆ ನೀಡುವುದು ನಮ್ಮ ಆದ್ಯತೆ ಆಗಿದೆ. ಕೆಲವು ರಾಜ್ಯಗಳಲ್ಲಿ ವಿದ್ಯುತ್ ಉಚಿತವಾಗಿ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ನಾವು ಎಂದಿಗೂ ಹಾಗೆ ಹೇಳಿಲ್ಲ. ಉಚಿತದ ಭರವಸೆಯನ್ನೂ ನೀಡಿಲ್ಲ ಎಂದು ವಿಧಾನಸಭೆ ಅಧಿವೇಶನದಲ್ಲಿ ಸ್ಪಷ್ಟಪಡಿಸಿದರು. ರಾಜ್ಯದ ಜನರಿಗೆ ಉತ್ಕೃಷ್ಟದ ಹಾಗೂ ಅಡೆತಡೆ ಇಲ್ಲದಂತೆ ಕರೆಂಟ್ ನೀಡಲಾಗುತ್ತಿದೆ. ಹಾಗೂ ಜನರ ಸುರಕ್ಷತೆಗೆ ಆದ್ಯತೆ ನೀಡುತ್ತೇವೆ ಎಂದು ಚುನಾವಣೆ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದೆವು ಎಂಬುದನ್ನು ಸದನದ ಗಮನಕ್ಕೆ ತಂದರು.
ಈ ಬಗ್ಗೆ ಮಾತನಾಡುವ ವೇಳೆ ಬಿಹಾರದ ಇಂಧನ ಖಾತೆ ಸಚಿವ ಬಿಜೇಂದ್ರ ಯಾದವ್ ಕಡೆಗೆ ಕೈತೋರಿದ ನಿತೀಶ್ ಕುಮಾರ್, ಅವರು ಪ್ರಾಮಾಣಿಕರು ಅವರ ಮಾತನ್ನು ಕೇಳಿ ಎಂದರು. ಆದರೆ, ಪ್ರತಿಪಕ್ಷಗಳು ಬಜೆಟ್ ಭಾಷಣವನ್ನು ಬಹಿಷ್ಕರಿಸಿದವು.
ಇನ್ನು ವಿದ್ಯುತ್ ವಿಚಾರದ ಬಗ್ಗೆ ಬಿಜೇಂದ್ರ ಪ್ರಸಾದ್ ಯಾದವ್ ಮಾತನಾಡಿ, ಬಿಹಾರದ ಜನರ ವಿದ್ಯುತ್ ಬಿಲ್ ಬೇರೆ ರಾಜ್ಯಗಳಿಗಿಂತ ದುಬಾರಿಯಾಗಿದ್ದರೆ ನಾವು ಅದನ್ನು ಖಂಡಿತವಾಗಿ ಕಡಿಮೆ ಮಾಡುತ್ತೇವೆ. ಆದರೆ ಉಚಿತವಾಗಿ ನೀಡುವುದಿಲ್ಲ. ಈ ಉಚಿತ ವಿದ್ಯುತ್ ಎಷ್ಟು ದಿನ ಇರುತ್ತದೆ?. ಅಷ್ಟಕ್ಕೂ ಇದೆಲ್ಲದಕ್ಕೂ ಹಣ ಎಲ್ಲಿಂದ ಬರುತ್ತದೆ? ಇನ್ನು ವಿದ್ಯುತ್ಗಾಗಿ ನಾವು 14 ಸಾವಿರ ಕೋಟಿ ರೂಗಿಂತ ಹೆಚ್ಚು ಸಬ್ಸಿಡಿ ನೀಡುತ್ತಿದ್ದೇವೆ. ಈಗ ನಿಮಗೆ ಇನ್ನೇನು ಸೌಲಭ್ಯ ಬೇಕು? ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲ ಅಂಕಿ- ಅಂಶಗಳ ಸಮೇತ ವಿವರಣೆ ನೀಡಿದ ಸಚಿವರು ಉಚಿತ ವಿದ್ಯುತ್ ಮಾತ್ರ ನೀಡುವುದಿಲ್ಲ. ಆದರೆ ನ್ಯಾಯಯುತ ಬೆಲೆಯಲ್ಲಿ ಯಾರಿಗೂ ಹೊರೆಯಾಗದಂತೆ ವಿದ್ಯುತ್ ಬಿಲ್ ನೀಡುತ್ತೇವೆ ಎಂದು ಇದೇ ವೇಳೆ ಅವರು ಸದನಕ್ಕೆ ಭರವಸೆ ನೀಡಿದರು.
ನಿತೀಶ್ ವಿರುದ್ಧ ರಾಬ್ರಿ ಕಿಡಿ: ಈ ನಡುವೆ ನಿತೀಶ್ ಕುಮಾರ್ ಅವರು ಎಗ್ಗಿಲ್ಲದೇ ಮೈತ್ರಿ ಬದಲಿಸುವ ಚಾಳಿ ಬಗ್ಗೆ ಮಾಜಿ ಸಿಎಂ ರಾಬ್ರಿ ದೇವಿ ಕಿಡಿಕಾರಿದ್ದಾರೆ. ಕಳೆದ ಬಾರಿ ನಿತೀಶ್ ಕುಮಾರ ತಮ್ಮ ಸ್ವ ಇಚ್ಚೆಯಂತೆ ಆರ್ಜೆಡಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದರು. ಇನ್ನು ಯಾವುದೇ ಒತ್ತಡ ಇಲ್ಲದಿದ್ದರೂ ಮೈತ್ರಿಯನ್ನು ತೊರೆದಿದ್ದಾರೆ. ಕಳೆದ 25 ವರ್ಷಗಳಿಂದ ನಮ್ಮ ವಿರುದ್ಧ ತನಿಖೆ ನಡೆಯುತ್ತಿದೆ. ಇಡಿ , ಸಿಬಿಐ, ಹೊಸದೇನೂ ಇಲ್ಲ. ಬಿಹಾರ ಮತ್ತು ದೇಶದ ಜನತೆ ನಮ್ಮೊಂದಿಗಿದ್ದಾರೆ ಎನ್ನುವ ಮೂಲಕ ನಿತೀಶ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನು ಓದಿ: ತಮ್ಮ ಪರಿವಾರಕ್ಕಾಗಿ ಕೆಲಸ ಮಾಡ್ತಾರೆ, ಬಡವರಿಗಾಗಿ ಅಲ್ಲ; 'ಇಂಡಿಯಾ' ಮೈತ್ರಿಕೂಟದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ