ನವದೆಹಲಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕವನ್ನು ಇಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿತು. ಹಾವೇರಿ ಜಿಲ್ಲೆಯ ಶಿಗ್ಗಾಂವಿ, ರಾಮನಗರ ಜಿಲ್ಲೆಯ ಚನ್ನಪಟ್ಟಣ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆಯಲಿದ್ದು, ನ.23ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಆಯೋಗ ತಿಳಿಸಿದೆ.
ದೆಹಲಿಯ ವಿಜ್ಞಾನ ಭವನದ ಪ್ಲಿನರಿ ಹಾಲ್‌ನಲ್ಲಿಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಉಪ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದರು.
ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ಚನ್ನಪಟ್ಟಣ, ಬಸವರಾಜ್ ಬೊಮ್ಮಾಯಿ ರಾಜೀನಾಮೆಯಿಂದ ಶಿಗ್ಗಾಂವಿ ಮತ್ತು ಈ.ತುಕಾರಾಂ ರಾಜೀನಾಮೆಯಿಂದ ಸಂಡೂರು ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಈ ಮೂವರು ಸಂಸದರಾಗಿ ಆಯ್ಕೆಯಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ.
ದೇಶಾದ್ಯಂತ ಒಟ್ಟು 48 ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನೂ ಆಯೋಗ ಪ್ರಕಟಿಸಿದೆ.
ಅಕ್ಟೋಬರ್ 18ರಂದು ಚುನಾವಣೆಗೆ ಅಧಿಸೂಚನೆ ಪ್ರಕಟಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನ. ನಾಮಪತ್ರ ಹಿಂಪಡೆಯಲು ಕೊನೆಯ ದಿನ ಅಕ್ಟೋಬರ್ 30 ಎಂದು ಆಯೋಗ ತಿಳಿಸಿದೆ.
ಉಪಚುನಾವಣಾ ವೇಳಾಪಟ್ಟಿ | |
ಅಧಿಸೂಚನೆ | 18-10-2024 (ಶುಕ್ರವಾರ) |
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ | 25-10-2024 (ಶುಕ್ರವಾರ) |
ನಾಮಪತ್ರ ಪರಿಶೀಲನೆ | 28-10-2024 (ಸೋಮವಾರ) |
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ | 30-10-2024 (ಬುಧವಾರ) |
ಮತದಾನ | 13-11-2024 (ಬುಧವಾರ) |
ಮತಎಣಿಕೆ | 23-11-2024 (ಶನಿವಾರ) |
ಇದನ್ನೂ ಓದಿ: ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ; ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸಲು ನಡೆದಿದೆಯೇ ತಯಾರಿ?
ಇದನ್ನೂ ಓದಿ: ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ