ಸಂಬಲ್‌ಪುರ(ಒಡಿಶಾ): ಪುರಿಯಿಂದ ಅಹಮದಾಬಾದ್ಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಿಂದ 76 ವರ್ಷದ ಮಹಿಳೆಯೊಬ್ಬರು ಹಳಿಗೆ ಬಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಒಡಿಶಾದ ಸಂಬಲ್ಪುರದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಅಲ್ಪಸ್ವಲ್ಪ ಗಾಯಗೊಂಡಿದ್ದ ಮಹಿಳೆ ಪಾರ್ವತಿ ದಾಸ್ ಅವರನ್ನು ರೆಬಾಚೋಲ್ ಆರ್‌ಪಿಎಫ್ ನೆರವಿನಿಂದ ರಕ್ಷಿಸಿ, ಪ್ರಥಮ ಚಿಕಿತ್ಸೆ ನೀಡಿ ಮನೆಯವರಿಗೆ ಹಸ್ತಾಂತರಿಸಲಾಗಿದೆ.
ಎಎಸ್ಐ ಮನೋಜ್ ಕುಮಾರ್ ಸಮಾಲ್ ಅವರು ಹೇಳುವ ಪ್ರಕಾರ, ಕೇಂದ್ರಪಾರ ಜಿಲ್ಲೆಯ ಬರೌ, ಪೊಯಿಪಟ್ನ ಪ್ರದ್ಯುಮ್ನ ದಾಸ್ ಅವರು ತಮ್ಮ ಪತ್ನಿ, ಮಗಳು ಹಾಗೂ ತಾಯಿ (ಪಾರ್ವತಿ ದಾಸ್) ಅವರೊಂದಿಗೆ ಪುರಿ-ಅಹಮದಾಬಾದ್ ಎಕ್ಸ್ಪ್ರೆಸ್ನಲ್ಲಿ ಭುವನೇಶ್ವರದಿಂದ ಅಹಮದಾಬಾದ್ಗೆ ಪ್ರಯಾಣಿಸುತ್ತಿದ್ದರು. ತಡರಾತ್ರಿ 3 ಗಂಟೆ ಸುಮಾರಿಗೆ ಕುಟುಂಬದವರೆಲ್ಲರೂ ರೈಲಿನಲ್ಲಿ ಮಲಗಿದ್ದಾಗ, ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪಾರ್ವತಿ ದಾಸ್ ಅವರು ಸಂಬಲ್‌ಪುರ ಹತಿಬರಿ ನಿಲ್ದಾಣದ ಬಳಿ ತಮ್ಮ ಸೀಟ್ನಿಂದ ಎದ್ದು ರೈಲಿನ ಬಾಗಿಲಿನ ಕಡೆಗೆ ಹೋಗಿದ್ದಾರೆ. ಅಲ್ಲಿ ನಡೆದಾಡುತ್ತಿದ್ದಾಗ ಜಾರಿ ಹಳಿ ಮೇಲೆ ಬಿದ್ದಿದ್ದಾರೆ. ಹತಿಬರಿ ಪ್ರದೇಶದಲ್ಲಿ ಆನೆಗಳ ಚಲನವಲನ ಇರುವುದರಿಂದ ಪಾರ್ವತಿ ಅವರು ಬಿದ್ದಾಗ ರೈಲಿನ ವೇಗ ತುಲನಾತ್ಮಕವಾಗಿ ಕಡಿಮೆಯಾಗಿತ್ತು. ಈ ವಿಷಯ ಮನೆಯವರಿಗೆ ತಿಳಿಯುವಷ್ಟರಲ್ಲಿ ರೈಲು ಆಗಲೇ ಸುಮಾರು 70 ಕಿ.ಮೀ ದೂರದಲ್ಲಿರುವ ಬರ್ಗಢ್ ನಿಲ್ದಾಣವನ್ನು ತಲುಪಿತ್ತು.
ವೃದ್ಧೆಯನ್ನು ರಕ್ಷಿಸಿದ ಟ್ರ್ಯಾಕ್ಮ್ಯಾನ್: ಏನು ಮಾಡಬೇಕೆಂದು ತೋಚದೆ ಹಳಿ ಮೇಲೆ ನಿಂತಿದ್ದ 76 ವರ್ಷದ ಪಾರ್ವತಿ ದಾಸ್ ಅವರನ್ನು ಅಲ್ಲೇ ಕೆಲಸ ಮಾಡುತ್ತಿದ್ದ ಟ್ರ್ಯಾಕ್ಮ್ಯಾನ್ ಗಮನಿಸಿದ್ದಾರೆ. ಆ ಕತ್ತಲ ಹೊತ್ತಲ್ಲಿ ರೈಲ್ವೇ ಹಳಿಯಲ್ಲಿ ವೃದ್ಧೆಯನ್ನು ಕಂಡು ಅನುಮಾನಗೊಂಡ ಟ್ರ್ಯಾಕ್ಮ್ಯಾನ್ ಅವರನ್ನು ರಕ್ಷಿಸಿ, ಹತಿಬರಿಯಲ್ಲಿ ಕೆಲಸ ಮಾಡುತ್ತಿದ್ದ ಆರ್‌ಪಿಎಫ್ ಅಧಿಕಾರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆರ್‌ಪಿಎಫ್ ಅಧಿಕಾರಿ ಪಾರ್ವತಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪರಿಣಾಮ ಪಾರ್ವತಿ ಅವರ ತಲೆ ಹಾಗೂ ಕೈಗೆ ಗಾಯಗಳಾಗಿವೆ.
ಮಗನನ್ನು ಸೇರಿದ ತಾಯಿ: ಇದೇ ವೇಳೆ ಪುತ್ರ ಪ್ರದ್ಯುಮ್ನ ಬರ್ಗಢ್ ನಿಲ್ದಾಣದಲ್ಲಿ ಇಳಿದು, ತನ್ನ ತಾಯಿ ನಾಪತ್ತೆಯಾಗಿರುವ ಬಗ್ಗೆ ಆರ್ಪಿಎಫ್ಗೆ ಮಾಹಿತಿ ನೀಡಿದ್ದಾರೆ. ಬರ್ಗಢ್ ಆರ್‌ಪಿಎಫ್ ರೆಬಾಚೋಲ್ ಆರ್‌ಪಿಎಫ್ ಅನ್ನು ಸಂಪರ್ಕಿಸಿದೆ. ರೆಬಾಚೋಲ್ ಆರ್‌ಪಿಎಫ್ ಹತಿಬರಿಯಲ್ಲಿ ರಕ್ಷಿಸಲ್ಪಟ್ಟ ಪಾರ್ವತಿ ಅವರನ್ನು ಬರ್ಗಢ್ ಆರ್ಪಿಎಫ್ಗೆ ವಿಡಿಯೋ ಕರೆ ಮೂಲಕ ತೋರಿಸಿದ್ದಾರೆ. ಮಗ ತನ್ನ ತಾಯಿಯನ್ನು ಗುರುತಿಸಿದ ನಂತರ, ರೆಬಾಚೋಲ್ ಆರ್‌ಪಿಎಫ್ ವೃದ್ಧೆ ಪಾರ್ವತಿ ಅವರನ್ನು ಆಂಬ್ಯುಲೆನ್ಸ್ ಮೂಲಕ ಸಂಬಲ್‌ಪುರ ಜಿಲ್ಲಾ ಜನರಲ್ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ಇದಲ್ಲದೇ ಪಾರ್ವತಿ ಅವರ ಪುತ್ರ ಪ್ರದ್ಯುಮ್ನ ಅವರನ್ನು ಬರ್ಗಢ್ನಿಂದ ಸಂಬಲ್‌ಪುರ ಜಿಲ್ಲಾ ಜನರಲ್ ಆಸ್ಪತ್ರೆಗೆ ಕರೆಸಲಾಗಿದ್ದು, ಅಲ್ಲಿ ಆಧಾರ್ ಕಾರ್ಡ್ ಪರಿಶೀಲಿಸಿ ಪಾರ್ವತಿ ಅವರನ್ನು ಮಗನಿಗೆ ಹಸ್ತಾಂತರಿಸಲಾಯಿತು.
ತಾಯಿಯ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರೈಲ್ವೆ ಸಿಬ್ಬಂದಿ ಮತ್ತು ಟ್ರ್ಯಾಕ್ಮ್ಯಾನ್ಗೆ ಮಗ ಪ್ರದ್ಯುಮ್ನ ಕೃತಜ್ಞತೆ ಸಲ್ಲಿಸಿದರು. ಆ ನಂತರ ತಾಯಿ ಮತ್ತು ಮಗ ಪ್ಯಾಸೆಂಜರ್ ರೈಲಿನಲ್ಲಿ ಭುವನೇಶ್ವರಕ್ಕೆ ಮರಳಿದರು.
ಇದನ್ನೂ ಓದಿ: ಅಪಹರಣಕ್ಕೊಳಗಾದ ಒಂದೂವರೆ ತಿಂಗಳ ಮಗು ರೈಲು ನಿಲ್ದಾಣದಲ್ಲಿ ಪತ್ತೆ: ಮಹಿಳೆ ಸೇರಿ ಇಬ್ಬರ ಬಂಧನ