ಹರ್ದೋಯಿ (ಉತ್ತರ ಪ್ರದೇಶ): ಮನೆಯಿಂದ ಹೊರಗೆ ಮಲಗಿದ್ದವರ ಮೇಲೆ ಮರಳು ತುಂಬಿದ ಟ್ರಕ್ ಪಲ್ಟಿಯಾಗಿದ್ದು, ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಹರ್ದೋಯಿಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಗೋಸ್ವಾಮಿ ತಿಳಿಸಿದ್ದಾರೆ.
ಕುಟುಂಬವನ್ನು ರಕ್ಷಿಸಲು ಸ್ಥಳೀಯರು ಮರಳನ್ನು ತೆಗೆಯಲು ಪ್ರಯತ್ನಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಎಂಟು ಮಂದಿ ಕೂಡ ಮರಳಿನ ಅಡಿ ಜೀವಂತ ಸಮಾಧಿಯಾಗಿದ್ದರು. ನಂತರ ಮರಳು ತೆಗೆಯಲು ಜೆಸಿಬಿ ಕರೆಸಿ, ಶವಗಳನ್ನು ಹೊರತೆಗೆಯಲಾಯಿತು.
ಮೃತರನ್ನು ಅವಧೇಶ್ (40), ಅವರ ಪತ್ನಿ ಸುಧಾ (35) ಮತ್ತು ಅವರ ಮೂವರು ಮಕ್ಕಳಾದ ಲಲ್ಲಾ (5), ಸುನೈನಾ (11) ಮತ್ತು ಬುದ್ದು (4) ಮತ್ತು ಅವರ ಸಂಬಂಧಿ ಕರಣ್ (35), ಅವರ ಪತ್ನಿ ಹೀರೋ (30) ಮತ್ತು ಅವರ ಮಗಳು ಕೋಮಲ್ (5) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಐದು ವರ್ಷದ ಮತ್ತೊಬ್ಬ ಬಾಲಕಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿಬಿದ್ದು ಯುವಕ ಸಾವು - SELFIE TRAGEDY