ನವದೆಹಲಿ: ಜಾಗತಿಕವಾಗಿ ಪ್ರಜ್ಞಾವಂತರು ಮತ್ತು ಸುಶಿಕ್ಷಿತರು ಜನಪ್ರಿಯ ವ್ಯಕ್ತಿಯನ್ನು ಹೆಚ್ಚು ಕಾಲ ಬೆಂಬಲಿಸುವುದಿಲ್ಲ. ಆದರೆ, ಭಾರತದಲ್ಲಿ ಇದು ಸುಳ್ಳಾಗಿದೆ. ವಿಶ್ವಖ್ಯಾತಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವವರ ಪೈಕಿ ಸುಶಿಕ್ಷಿತರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಬ್ರಿಟನ್ ಮೂಲದ 'ದ ಎಕನಾಮಿಸ್ಟ್' ಪತ್ರಿಕೆ ಹೇಳಿದೆ.
'ವೈ ಇಂಡಿಯಾ ಎಲೈಟ್ಸ್ ಬ್ಯಾಕ್ ನರೇಂದ್ರ ಮೋದಿ?' ಎಂಬ ಅಡಿಬರಹದಲ್ಲಿ ಲೇಖನ ಬಿತ್ತರಿಸಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದಲ್ಲಿ ವ್ಯಕ್ತವಾಗುತ್ತಿರುವ ಬೆಂಬಲ ಮತ್ತು ಅವರು ದೇಶದ ಮೇಲೆ ಬೀರಿರುವ ಪ್ರಭಾವದ ಬಗ್ಗೆ ವಿವರಿಸಲಾಗಿದೆ.
ನರೇಂದ್ರ ಮೋದಿ ಆಡಳಿತಕ್ಕೆ ಮೂರು ಕಾರಣಕ್ಕಾಗಿ ಹೆಚ್ಚಿನ ಬೆಂಬಲ ವ್ಯಕ್ತವಾಗಿದ್ದನ್ನು ಲೇಖನ ಕಂಡುಕೊಂಡಿದೆ. ಮಾದರಿ ರಾಜಕೀಯ, ಸದೃಢ ಆರ್ಥಿಕತೆ, ಗಟ್ಟಿ ನಿರ್ಧಾರಗಳ ಪ್ರಭುತ್ವವು ಶಿಕ್ಷಿತರನ್ನು ಸೆಳೆದಿದೆ. ಈ ಕಾರಣಕ್ಕಾಗಿ ಭಾರತೀಯ ಸುಶಿಕ್ಷಿತರು ಮೋದಿ ಅವರನ್ನೂ ಹೆಚ್ಚಾಗಿ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದೆ.
ಮೋದಿ ವಿಷಯದಲ್ಲಿ 'ವಿರೋಧಾಭಾಸ': ಜಾಗತಿಕವಾಗಿ ಹೆಚ್ಚು ಖ್ಯಾತಿ ಹೊಂದಿದ ವ್ಯಕ್ತಿಯು ಸಹಜವಾಗಿ ಕಾಲಾನಂತರ ಟೀಕೆಗೆ ಗುರಿಯಾಗುತ್ತಾರೆ. ಆದರೆ, ಭಾರತದಲ್ಲಿ ಮೂರನೇ ಬಾರಿಗೆ ಆರಿಸಿ ಬರಲು ಸಜ್ಜಾಗಿರುವ ಪ್ರಧಾನಿ ಮೋದಿ ವಿಷಯದಲ್ಲಿ 'ವಿರೋಧಾಭಾಸ' ಸೃಷ್ಟಿಯಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಬ್ರೆಕ್ಸಿಟ್ ನೀತಿಗಳು, ಜನಪರವಾದಿಗಳ ವಿರೋಧವಿದೆ. ಆದರೆ, ಭಾರತದಂತಹ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮೋದಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ ಎಂದು ಲೇಖನ ಉಲ್ಲೇಖಿಸಿದೆ.
ಇದಕ್ಕೆ ಸಾಕ್ಷಿಗಳನ್ನೂ ನೀಡಿರುವ ಲೇಖನ, ಈಚೆಗೆ ನಡೆದ ಗ್ಯಾಲಪ್ ಸಮೀಕ್ಷೆಯಲ್ಲಿ ಡೊನಾಲ್ಡ್ ಟ್ರಂಪ್ಗೆ ಉನ್ನತ ಶಿಕ್ಷಣ ಪಡೆದ ಶೇಕಡಾ 26ರಷ್ಟು ಅಮೆರಿಕನ್ ಸುಶಿಕ್ಷಿತರು ಮಾತ್ರ ಬೆಂಬಲ ವ್ಯಕ್ತಪಡಿಸಿದರೆ, ಮೋದಿಗೆ ಸಾರಾಸಗಟಾಗಿ ಬೆಂಬಲ ವ್ಯಕ್ತವಾಗಿದೆ.
2017ರಲ್ಲಿ ನಡೆದ ಪ್ಯೂ ರಿಸರ್ಚ್ ಸಮೀಕ್ಷೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಪಡೆದ ಶೇಕಡಾ 66 ರಷ್ಟು ಭಾರತೀಯರು ಮೋದಿಯ ಬಗ್ಗೆ 'ಉತ್ತಮ' ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಉನ್ನತ ಶಿಕ್ಷಣ ಪಡೆದ ಶೇಕಡಾ 80ಕ್ಕೂ ಅಧಿಕ ಜನರು ಬೆಂಬಲಿಸಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯ ನಂತರ ನಡೆದ ಲೋಕನೀತಿ ಸಮೀಕ್ಷೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಪಡೆದ ಶೇಕಡಾ 42 ಪ್ರತಿಶತದಷ್ಟು ಭಾರತೀಯರು ಮೋದಿಯವರ ಆಡಳಿತವನ್ನು ಮೆಚ್ಚಿದ್ದರೆ, ಉನ್ನತ ಶಿಕ್ಷಣ ಪಡೆದವರ ಪ್ರಮಾಣ ಶೇಕಡಾ 35 ರಷ್ಟಿದೆ ಎಂದು ಲೇಖನದಲ್ಲಿ ಹೇಳಲಾಗಿದೆ.
ಮೋದಿಗೆ 'ಎದುರಾಳಿ'ಯೇ ಇಲ್ಲ: ಲೇಖನದಲ್ಲಿ ಪ್ರಮುಖವಾಗಿ ಗಮನ ಸೆಳೆದ ಅಂಶವೆಂದರೆ, ಭಾರತವಲ್ಲದೇ ಜಾಗತಿಕವಾಗಿಯೂ ಪ್ರಖ್ಯಾತಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದಲ್ಲಿ ಸರಿಸಮನಾಗಿ ನಿಲ್ಲುವ ಪ್ರತಿಪಕ್ಷದ ಓರ್ವ ನಾಯಕ ಇಲ್ಲ ಎಂದಿದೆ. ದೇಶದ ಪ್ರಜ್ಞಾವಂತ ಮತ್ತು ಶಿಕ್ಷಿತ ಮತದಾರರು ಬೇರೊಬ್ಬ ನಾಯಕನಿಗೆ ಈ ಪ್ರಮಾಣದಲ್ಲಿ ಬೆಂಬಲ ನೀಡುತ್ತಿಲ್ಲ ಎಂದು ದ ಎಕನಾಮಿಸ್ಟ್ ಹೇಳಿದೆ.
ಭಾರತದಲ್ಲಿ ಮೋದಿಗೆ ಶಿಕ್ಷಿಕರ ಬೆಂಬಲ ವ್ಯಕ್ತವಾಗಲು ಸದೃಢ ಆಡಳಿತ ಮತ್ತು ಆರ್ಥಿಕ ಬೆಳವಣಿಗೆ ಪ್ರಮುಖ ಕಾರಣ ಎಂಬುದನ್ನು ಉಲ್ಲೇಖಿಸಲಾಗಿದೆ. ಕೆಳ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕವಾಗಿ ಸಶಕ್ತವಾಗುತ್ತಿರುವುದು ಜನರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಭಾರತದ ಜಿಡಿಪಿ ಬೆಳವಣಿಗೆಯು ಸ್ಥಿರವಾಗಿಲ್ಲವಾದರೂ, ಮೇಲ್ಮಧ್ಯಮ ವರ್ಗದ ಸಂಪತ್ತಿನಲ್ಲಿ ಹೆಚ್ಚಳ ದಾಖಲಾಗುತ್ತಿದೆ ಎಂದು ಲೇಖನ ಹೇಳಿದೆ.
ಕಾಂಗ್ರೆಸ್ಗೂ ಇತ್ತು ಇಂಥದ್ದೇ ಬೆಂಬಲ: 2000ರ ದಶಕದಲ್ಲಿ ಕಾಂಗ್ರೆಸ್ಗೂ ಇಂಥದ್ದೇ ಬೆಂಬಲ ಇತ್ತು ಎಂಬುದನ್ನು ಲೇಖನ ಹೇಳಿದೆ. ಭಾರತೀಯ ಸುಶಿಕ್ಷಿತರು ಅಂದು ಕಾಂಗ್ರೆಸ್ ಪಕ್ಷವನ್ನೂ ಮೋದಿಯಂತೆ ಬೆಂಬಲಿಸುತ್ತಿದ್ದರು. 2010ರ ಬಳಿಕ ಹೊರಬಂದ ಭ್ರಷ್ಟಾಚಾರ, ಸರಣಿ ಹಗರಣಗಳು ಜನರನ್ನು ಆ ಪಕ್ಷದಿಂದ ವಿಮುಖರನ್ನಾಗಿ ಮಾಡಿತು. ಬಲಿಷ್ಠವಾಗಿ ಬೆಳೆಯುತ್ತಿರುವ ನೆರೆರಾಷ್ಟ್ರ ಚೀನಾಕ್ಕೆ ಪರ್ಯಾಯವಾಗಿ ಭಾರತ ನಿಲ್ಲಬೇಕಾದರೆ, ಸದೃಢ ಆಡಳಿತ ನೀಡುವ ವ್ಯಕ್ತಿಯ ಅಗತ್ಯವನ್ನು ಜನರು ಕಂಡುಕೊಂಡಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನದಂತಹ ವಿಚಾರಗಳು ಪ್ರಧಾನಿ ಮೋದಿಗೆ ಹಿನ್ನಡೆ ತರುವ ಅಪಾಯಗಳಿವೆ. ಹೆಚ್ಚಿನ ವಿದ್ಯಾವಂತರು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಉಳಿಸಿಕೊಂಡ ಕಾರಣ ಈ ಪ್ರಕರಣಗಳು ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಮೇಲಾಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಮೋದಿ ಸರ್ಕಾರ ಯೋಜನೆಗಳನ್ನು ರೂಪಿಸುವ ಜತೆಗೆ ಅವುಗಳನ್ನು ಕಾರ್ಯಗತಗೊಳಿಸುವ ವೈಖರಿಯನ್ನು ಜನರು ಮೆಚ್ಚಿದ್ದಾರೆ ಎಂದು ಲೇಖನ ಗುರುತಿಸಿದೆ.