ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣವು ಇನ್ನಷ್ಟು ಜನರನ್ನು ಸುತ್ತಿಕೊಳ್ಳುತ್ತಿದ್ದು, ಸಾರಿಗೆ ಸಚಿವ ಮತ್ತು ಆಪ್ ನಾಯಕ ಕೈಲಾಶ್ ಗೆಹ್ಲೋಟ್ ಅವರಿಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಬರುವಂತೆ ಶನಿವಾರ ಸಮನ್ಸ್ ಜಾರಿ ಮಾಡಿದೆ. ಇದೇ ಪ್ರಕರಣದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಬೆನ್ನಲ್ಲೇ, ಆಪ್ ಪಕ್ಷದ ಮತ್ತೊಬ್ಬ ನಾಯಕನನ್ನು ಇಡಿ ವಿಚಾರಣೆಗೆ ಕರೆದಿರುವುದು ಮಹತ್ವ ಪಡೆದುಕೊಂಡಿದೆ.
ಅಬಕಾರಿ ಹಗರಣದಲ್ಲಿ ಈಗಾಗಲೇ ಈಗಾಗಲೇ ಸಿಎಂ ಕೇಜ್ರಿವಾಲ್, ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರಿ, ಬಿಆರ್ಎಸ್ ನಾಯಕಿ ಕೆ.ಕವಿತಾ ಸೇರಿದಂತೆ 16 ಜನರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆರೋಪಿಸಿರುವ ಇಡಿ, ಆಪ್ ಸಚಿವ ಅಶೋಕ್ ಗೆಹ್ಲೋಟ್ಗೆ ಇದೀಗ ಸಮನ್ಸ್ ಜಾರಿ ಮಾಡಿದೆ. ಈ ಬಗ್ಗೆ ಸಚಿವ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೇಜ್ರಿವಾಲ್ ವಜಾಕ್ಕೆ ಅರ್ಜಿ: ಇಡಿ ಬಂಧನದಲ್ಲಿದ್ದರೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡದ ಅರವಿಂದ್ ಕೇಜ್ರಿವಾಲ್ ಅವರನ್ನು ವಜಾ ಮಾಬೇಕು ಎಂದು ಆಗ್ರಹಿಸಿ ಹಿಂದೂ ಸೇನೆ ಶುಕ್ರವಾರ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಅವರು ಗಂಭೀರ ಆರೋಪದಲ್ಲಿ ಜೈಲು ಪಾಲಾಗಿದ್ದಾರೆ. ಹೀಗಿದ್ದಾಗ ಅವರು ಸಿಎಂ ಹುದ್ದೆಯಲ್ಲಿ ಮುಂದುವರಿಯುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಹುದ್ದೆಯಿಂದ ವಜಾಗೊಳಿಸಲು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಆದೇಶಿಸಬೇಕು. ಅವರ ಮೂಲಕ ಕೇಂದ್ರ ಸರ್ಕಾರದ ಅಡಿಯಲ್ಲಿ ದೆಹಲಿಯ ಆಡಳಿತ ನಡೆಸಬೇಕು ಎಂದು ಕೋರಲಾಗಿದೆ.
ದೆಹಲಿ ಸಿಎಂ ಪರ ಅಭಿಯಾನ: ದೆಹಲಿ ಮುಖ್ಯಮಂತ್ರಿಯ ಇಡಿ ಕಸ್ಟಡಿ ಅವಧಿಯನ್ನು ಏಪ್ರಿಲ್ 1ರ ವರೆಗೆ ರೋಸ್ ಅವೆನ್ಯೂ ನ್ಯಾಯಾಲಯವು ವಿಸ್ತರಿಸಿದೆ. ಕೇಜ್ರಿವಾಲ್ ಪತ್ನಿ ಸುನೀತಾ ಅವರು 'ಕೇಜ್ರಿವಾಲ್ ಕೋ ಆಶೀರ್ವಾದ್' ಎಂಬ ವಾಟ್ಸಾಪ್ ಅಭಿಯಾನವನ್ನು ಆರಂಭಿಸಿದ್ದಾರೆ.
ಇನ್ನು, ಕೋರ್ಟ್ನಲ್ಲಿ ವಿಚಾರಣೆಯ ವೇಳೆ ಅರವಿಂದ್ ಕೇಜ್ರಿವಾಲ್ ಅವರು ಇಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಡಿ ತನಿಖೆಯು ಮದ್ಯ ಹಗರಣವನ್ನು ಭೇದಿಸುವುದಲ್ಲ, ಅದರ ನಿಜವಾದ ಉದ್ದೇಶ ಆಮ್ ಆದ್ಮಿ ಪಕ್ಷವನ್ನು ಮುಗಿಸುವುದು ಎಂದು ಆರೋಪಿಸಿದ್ದಾರೆ. 2 ವರ್ಷಗಳಿಂದ ಪ್ರಕರಣ ನಡೆಯುತ್ತಿದ್ದು, ಯಾವುದೇ ಆರೋಪ ಸಾಬೀತು ಮಾಡಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಈ ಮಧ್ಯೆ, ದೆಹಲಿ ಸಿಎಂ ಬಂಧನವನ್ನು ವಿರೋಧಿಸಿ ನಾಳೆ ರಾಷ್ಟ್ರ ರಾಜಧಾನಿಯ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಇಂಡಿಯಾ ಕೂಟವು ಪ್ರತಿಭಟನೆ ನಡೆಸಲು ಸಜ್ಜಾಗಿದೆ. ಕಾಂಗ್ರೆಸ್, ಎಎಪಿ ಮತ್ತು ಎಡಪಕ್ಷಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: 'ಕೇಜ್ರಿವಾಲ್ ಕೋ ಆರ್ಶೀವಾದ್' ಅಭಿಯಾನ ಆರಂಭಿಸಿದ್ದೇವೆ ಎಂದ ಸುನೀತಾ ಕೇಜ್ರಿವಾಲ್ - sunita kejriwal