ಕೋಲ್ಕತ್ತಾ (ಪಶ್ಚಿಮ ಬಂಗಾಳ): ಐಪಿಎಸ್ ಅಧಿಕಾರಿ ವಿವೇಕ್ ಸಹಾಯ್ ಅವರನ್ನು ಪಶ್ಚಿಮ ಬಂಗಾಳದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ನೇಮಿಸಿದ ಒಂದೇ ದಿನದಲ್ಲಿ ಅವರನ್ನು ಹುದ್ದೆಯಿಂದ ಕೈಬಿಡಲಾಗಿದೆ. ಅವರ ಬದಲಿಗೆ ಸಂಜಯ್ ಮುಖರ್ಜಿ ಅವರನ್ನು ಹೊಸ ಡಿಜಿಪಿಯಾಗಿ ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗ ಮಂಗಳವಾರ ಸೂಚಿಸಿದೆ.
ವಿವೇಕ್ ಸಹಾಯ್ ಅವರನ್ನು ಹಿರಿತನದ ಆಧಾರದ ಮೇಲೆ ಡಿಜಿಪಿಯಾಗಿ ನೇಮಕ ಮಾಡಲಾಗಿತ್ತು. ಆದರೆ ಲೋಕಸಭೆ ಚುನಾವಣೆ ಮುಗಿಯುವ ಮೊದಲೇ ಅಂದರೆ ಮೇ ಕೊನೆಯ ವಾರದಲ್ಲಿ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಹೀಗಾಗಿ ಅವರು ಆ ಸ್ಥಾನದಿಂದ ತಪ್ಪಿಸಿ, ಸಂಜಯ್ ಮುಖರ್ಜಿ ಅವರನ್ನು ಡಿಜಿಪಿಯಾಗಿ ನೇಮಿಸಲು ಆದೇಶಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
1989ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸಂಜಯ್ ಮುಖರ್ಜಿ ಅವರು ಪಶ್ಚಿಮ ಬಂಗಾಳ ಸರ್ಕಾರವು ಡಿಜಿಪಿ ಹುದ್ದೆಗೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದ ಮೂವರು ಅಧಿಕಾರಿಗಳ ಪಟ್ಟಿಯಲ್ಲಿ ಎರಡನೇ ವ್ಯಕ್ತಿಯಾಗಿದ್ದರು. ಮಂಗಳವಾರ ಸಂಜೆ 5 ಗಂಟೆಯೊಳಗೆ ತಕ್ಷಣಕ್ಕೆ ಜಾರಿಯಾಗುವಂತೆ ನೇಮಕ ಮಾಡಿ ಆದೇಶ ಹೊರಡಿಸಲು ಚುನಾವಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ನಿರ್ದೇಶನ ನೀಡಿದೆ.
ರಾಜೀವ್ಕುಮಾರ್ ಎತ್ತಂಗಡಿ: ಇದಕ್ಕೂ ಮೊದಲು ಚುನಾವಣಾ ಆಯೋಗವು ಡಿಜಿಪಿಯಾಗಿದ್ದ ರಾಜೀವ್ ಕುಮಾರ್ ಅವರನ್ನು ಸೋಮವಾರ ವರ್ಗ ಮಾಡಿ ಆದೇಶ ಹೊರಡಿಸಿತ್ತು. ಹಿರಿಯ ಪೊಲೀಸ್ ಅಧಿಕಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪರಮಾಪ್ತರಾಗಿ ಗುರುತಿಸಿಕೊಂಡಿದ್ದರು. ಇದರಿಂದಾಗಿ ರಾಜ್ಯದಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಅವರನ್ನು ಡಿಜಿಪಿ ಹುದ್ದೆಯಿಂದ ವಜಾ ಮಾಡಿತ್ತು.
ಇದರ ಜೊತೆಗೆ ಗುಜರಾತ್, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ 6 ರಾಜ್ಯಗಳಲ್ಲಿ ಗೃಹ ಕಾರ್ಯದರ್ಶಿಗಳನ್ನು ಪದಚ್ಯುತಗೊಳಿಸಲು ಆಯೋಗವು ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಸುಪ್ರೀಂ ಮೇಲ್ವಿಚಾರಣೆ ನಡೆಸಲಿ: ಚುನಾವಣಾ ಆಯೋಗದ ಈ ನಿರ್ಧಾರವು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೇಲೆ ಪ್ರಭಾವ ಬೀರುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್ ನಿಗಾದಲ್ಲಿ ಲೋಕಸಭೆ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸಿದೆ.
ಟಿಎಂಸಿ ಪಕ್ಷದ ರಾಜ್ಯಸಭಾ ಸಂಸದ ಡೆರೆಕ್ ಓಬ್ರಿಯನ್ ಮಾತನಾಡಿ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಲೋಕಸಭೆ ಚುನಾವಣೆ ನಡೆಸಬೇಕು. ಬಿಜೆಪಿಯ ತಂತ್ರಗಳು ಕೇಂದ್ರ ಚುನಾವಣಾ ಆಯೋಗವನ್ನು ನಾಶ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಚುನಾವಣಾ ಆಯೋಗವನ್ನು ತನ್ನ ಗೆಲುವಿಗಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಟಿಎಂಸಿ ನಾಯಕ ಆರೋಪಿಸಿ, ಪ್ರತಿಪಕ್ಷಗಳಿಗೆ ಹೆದರುತ್ತಿರುವ ಬಿಜೆಪಿ ತನ್ನ ಹಿತಾಸಕ್ತಿಗಾಗಿ ಚುನಾವಣಾ ಆಯೋಗದ ಕಚೇರಿಯನ್ನು ಪಕ್ಷದ ಕಚೇರಿಯಾಗಿ ಪರಿವರ್ತಿಸುತ್ತಿದೆ. ಚುನಾಯಿತ ರಾಜ್ಯ ಸರ್ಕಾರಗಳ ಅಧಿಕಾರಿಗಳನ್ನು ವರ್ಗಾವಣೆಯನ್ನು ತನ್ನ ಮೂಗಿನ ನೇರಕ್ಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಮುಂದಿನ ಚುನಾವಣೆ ನಡೆಯಬೇಕು ಎಂದು ಕೋರಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಡಿಜಿಪಿ ರಾಜೀವ್ ವಜಾ: 6 ರಾಜ್ಯಗಳ ಅಧಿಕಾರಿಗಳ ವರ್ಗಾವಣೆಗೆ ಸೂಚಿಸಿದ ಚುನಾವಣಾ ಆಯೋಗ