ಪೂರ್ಣಿಯಾ(ಬಿಹಾರ): ಬಿಹಾರದ ಪೂರ್ಣಿಯಾ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ಮೈತ್ರಿ ಭಾಗವಾಗಿ ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಜೆಡಿಯುಗೆ ಬಿಟ್ಟುಕೊಟ್ಟಿದೆ. ಇದರಿಂದ ಅತೃಪ್ತಿಗೊಂಡ ಪಪ್ಪು ಯಾದವ್ ಕಣಕ್ಕಿಳಿದಿದ್ದಾರೆ.
ಪಪ್ಪು ಯಾದವ್ ತಮ್ಮ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿಗೆ ಮೋಟಾರ್ ಸೈಕಲ್‌ನಲ್ಲಿ ಮೆರವಣಿಗೆ ತೆರಳಿದರು. ಈ ವೇಳೆ, ಕಾಂಗ್ರೆಸ್ ಯಾವುದೇ ನಾಯಕರು ಜತೆಗಿರಲಿಲ್ಲ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಕೊನೆಯುಸಿರಿರುವವರೆಗೂ ಪಕ್ಷದ ಜತೆ ಇರುತ್ತೇನೆ ಎಂದು ಹೇಳಿದರು. ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಯಾದವ್, ನನಗೆ ಕಾಂಗ್ರೆಸ್ ಬೆಂಬಲವಿದೆ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ನನ್ನ ರಾಜಕೀಯ ಬದುಕನ್ನು ಕೊನೆಗಾಣಿಸಲು ಹಲವರು ಸಂಚು ಮಾಡಿದ್ದಾರೆ ಎಂದು ಆರೋಪಿಸಿದರು.
ಮುಂದುವರೆದು, ಈ ಪಪ್ಪು ಯಾದವ್ ಅವರನ್ನು ಪೂರ್ಣಿಯಾ ಜನರು ಯಾವಾಗಲೂ ಜಾತಿ ಮತ್ತು ಧರ್ಮವನ್ನು ಮೀರಿ ಬೆಂಬಲಿಸಿದ್ದಾರೆ. ನಾನು ಇಂಡಿಯಾ ಮೈತ್ರಿಯನ್ನು ಬಲಪಡಿಸುತ್ತೇನೆ. ಜತೆಗೆ ರಾಹುಲ್ ಗಾಂಧಿ ಅವರನ್ನು ಬಲಪಡಿಸುವ ಸಂಕಲ್ಪವನ್ನೂ ನಾನು ಮಾಡುತ್ತೇನೆ. ಪೂರ್ಣಿಯಾ ಜನರು ನಾನು ಸ್ಪರ್ಧಿಸಬೇಕೆಂದು ಬಯಸಿದ್ದರಿಂದ ನಾನು ನಾಮಪತ್ರ ಸಲ್ಲಿಸಿದ್ದೇನೆ. ನಾನು ಪೂರ್ಣಿಯಾ, ಸೀಮಾಂಚಲ್ ಮತ್ತು ಬಿಹಾರದ ಜನರ ಕಲ್ಯಾಣಕ್ಕಾಗಿ ಹೋರಾಡುತ್ತೇನೆ ಎಂದು ಹೇಳಿದರು.
ಪಪ್ಪು ಯಾದವ್ 1990ರ ದಶಕದಲ್ಲಿ ಇದೇ ಪೂರ್ಣಿಯಾ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದರು. ಅಲ್ಲದೇ, ಮಾಧೇಪುರ ಲೋಕಸಭಾ ಕ್ಷೇತ್ರದಿಂದ ಆರ್‌ಜೆಡಿ ಪಕ್ಷದಿಂದ ಅವರು ಗೆದ್ದಿದ್ದರು. ಇದಾದ ಒಂದು ವರ್ಷದಲ್ಲಿ ಎಂದರೆ, 2015ರಲ್ಲಿ ಜನ್ ಅಧಿಕಾರ್ ಪಾರ್ಟಿ (ಜೆಎಪಿ)ಯನ್ನು ಸ್ಥಾಪಿಸಿದ್ದರು. 15 ದಿನಗಳ ಹಿಂದೆಯಷ್ಟೇ ಪಪ್ಪು ಯಾದವ್, ತಮ್ಮ ಮಗ ಸಾರ್ಥಕ್ ಸಮೇತವಾಗಿ ಕಾಂಗ್ರೆಸ್ಗೆ ಸೇರಿದ್ದರು. ಅಲ್ಲದೇ, ಪಕ್ಷವನ್ನೂ ವಿಲೀನಗೊಳಿಸಿದ್ದಾರೆ.
ಪೂರ್ಣಿಯಾ ಕ್ಷೇತ್ರದಲ್ಲಿ ಆರ್‌ಜೆಡಿ ಭೀಮಾ ಭಾರತಿ ಅವರನ್ನು ಕಣಕ್ಕಿಳಿಸಿದೆ. ಈಗಾಗಲೇ ಆರ್‌ಜೆಡಿ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸಮ್ಮುಖದಲ್ಲಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಮತ್ತು ಆರ್‌ಜೆಡಿ ತುಂಬಾ ಹಳೆಯ ಮೈತ್ರಿ ಪಕ್ಷಗಳು ಆಗಿದ್ದು, ಸೀಟು ಹಂಚಿಕೆಯಲ್ಲಿ ಪೂರ್ಣಿಯಾ ಕ್ಷೇತ್ರವು ಆರ್‌ಜೆಡಿ ಪಾಲಾಗಿದೆ. ಇದೇ ಕ್ಷೇತ್ರದಿಂದ ಪಪ್ಪು ಯಾದವ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅದು ಫಲ ಕೊಟ್ಟಿಲ್ಲ.
ಇದನ್ನೂ ಓದಿ: ಒಮ್ಮೆ ಹಾವನ್ನು ನಂಬಬಹುದು, ಬಿಜೆಪಿಯನ್ನಲ್ಲ: ಸಿಎಂ ಮಮತಾ ಬ್ಯಾನರ್ಜಿ ಕಿಡಿನುಡಿ