ನವದೆಹಲಿ: ಗಾಲಿಕುರ್ಚಿ ಸೇವೆ ವಿಳಂಬವಾದ ಹಿನ್ನೆಲೆಯಲ್ಲಿ 80 ವರ್ಷದ ವಯೋವೃದ್ಧ ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆಯಿತು. ಈ ಘಟನೆ ಸಂಬಂಧ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ವಾರದೊಳಗೆ ಘಟನೆ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದೆ.
ಸೋಮವಾರ ಭಾರತೀಯ ಮೂಲದ ವೃದ್ಧರೊಬ್ಬರು ನ್ಯೂಯಾರ್ಕ್‌ನಿಂದ ಏರ್ ಇಂಡಿಯಾ ವಿಮಾನದಲ್ಲಿ ಪತ್ನಿಯೊಂದಿಗೆ ಆಗಮಿಸಿದ್ದರು. ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದ ಇವರು, ಏರ್ ಇಂಡಿಯಾ ಟಿಕೆಟ್‌ಗಳನ್ನು ಪಡೆಯುವಾಗ ತಮಗೆ ಹಾಗೂ ತಮ್ಮ ಪತ್ನಿಗೆ ಗಾಲಿಕುರ್ಚಿ ಸೌಲಭ್ಯವನ್ನು ಮೊದಲೇ ಬುಕ್ ಮಾಡಿದ್ದಾರೆ. ಆದಾಗ್ಯೂ, ಗಾಲಿಕುರ್ಚಿಯ ಕೊರತೆಯಿಂದಾಗಿ ವಿಮಾನಯಾನ ಸಂಸ್ಥೆಯು ಈ ದಂಪತಿಗೆ ಒಂದೇ ಗಾಲಿಕುರ್ಚಿ ಒದಗಿಸಿತ್ತು ಎಂದು ವರದಿಯಾಗಿದೆ.
ಒಂದು ಕಿಲೋ ಮೀಟರ್ ನಡೆದೇ ಸಾಗಿದ ವೃದ್ಧ: ಇದರಿಂದ ಪತ್ನಿಯನ್ನು ಗಾಲಿಕುರ್ಚಿಯಲ್ಲಿ ಕೂರಿಸಿ ತಾನು ಆಕೆಯ ಹಿಂದೆ ನಡೆದುಕೊಂಡು ಹೋಗಲು ಆರಂಭಿಸಿದ್ದ. ಹೀಗೆ ಒಂದು ಕಿಲೋ ಮೀಟರ್ಗೂ ಹೆಚ್ಚು ಕಾಲ ಕಾಲ್ನಡಿಗೆಯಲ್ಲಿ ಹೋದ ನಂತರ ಹೃದಯಾಘಾತ ಉಂಟಾಗಿದೆ. ಪರಿಣಾಮ ದಾರಿಮಧ್ಯೆಯೇ ಕುಸಿದು ಬಿದ್ದು ವೃದ್ಧ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಆದ್ದರಿಂದ ಏರ್‌ಕ್ರಾಫ್ಟ್ ನಿಯಮಗಳು -1937 ಅನ್ನು ಉಲ್ಲಂಘಿಸಿ ಅನುಸರಿಸದ ಕಾರಣಕ್ಕೆ ಏರ್ ಇಂಡಿಯಾ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡಿದ ಏಳು ದಿನಗಳಲ್ಲಿ ಉತ್ತರ ಸಲ್ಲಿಸಬೇಕೆಂದು ಡಿಜಿಸಿಎ ಹೇಳಿಕೆಯಲ್ಲಿ ತಿಳಿಸಿದೆ. ಇದಲ್ಲದೆ, ವಿಮಾನವನ್ನು ಏರುವ ಅಥವಾ ಇಳಿಯುವ ಸಮಯದಲ್ಲಿ ಸಹಾಯದ ಅಗತ್ಯವಿರುವ ಪ್ರಯಾಣಿಕರಿಗೆ ಸಾಕಷ್ಟು ಸಂಖ್ಯೆಯ ಗಾಲಿಕುರ್ಚಿಗಳು ಲಭ್ಯವಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ವಿಮಾನಯಾನ ಸಂಸ್ಥೆಗಳಿಗೂ ಸಲಹೆ ನೀಡಲಾಗಿದೆ.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ, ಅಸಭ್ಯ ವರ್ತನೆ: ಪ್ರಯಾಣಿಕ ವಶಕ್ಕೆ