ಬಿಹಾರ: ಮಧ್ಯರಾತ್ರಿ ಮಲಗಿದ್ದಾಗ ಹರಿತ ಆಯುಧದಿಂದ ದಾಳಿ ಮಾಡಿದ ಭಗ್ನ ಪ್ರೇಮಿ ಹಾಗೂ ಆತನ ಸ್ನೇಹಿತ, ತಂದೆ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾರೆ. ಛಾಪ್ರಾ ಜಿಲ್ಲೆಯ ರಸೂಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಧನದಿಹ್ ಎಂಬ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಘಟನೆ ನಡೆದಿದೆ.
ತಾರಕೇಶ್ವರ್ ಸಿಂಗ್ ಅಲಿಯಾಸ್ ಜಬರ್ ಸಿಂಗ್ (50) ಮತ್ತು ಅವರ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಕೊಲೆಗೀಡಾದವರು. ತ್ರಿವಳಿ ಕೊಲೆಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಹಂತಕರಾದ ಸುಧಾಂಶು ಕುಮಾರ್ ಅಲಿಯಾಸ್ ರೋಷನ್ ಮತ್ತು ಅಂಕಿತ್ ಕುಮಾರ್ ಎಂಬಿಬ್ಬರನ್ನು ಬಂಧಿಸಿರುವುದಾಗಿ ಸರನ್ ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಯಿಯೂ ಗಂಭೀರವಾಗಿ ಗಾಯಗೊಂಡಿದ್ದು, ಎಕ್ಮಾ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಛಪ್ರಾ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕೊಲೆಗೆ ಪ್ರೀತಿ ವಿಚಾರವೇ ಕಾರಣ ಇರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
"ಊಟ ಮುಗಿಸಿ ರಾತ್ರಿ ಎಲ್ಲರೂ ಮನೆಯ ಟೆರೇಸ್ ಮೇಲೆ ಮಲಗಿದ್ದೆವು. ಈ ವೇಳೆ ಹರಿತವಾದ ಆಯುಧದ ಜೊತೆಗೆ ದಾಳಿ ಮಾಡಿದ ದುಷ್ಕರ್ಮಿಗಳು, ನನ್ನ ಪತಿ ಮತ್ತು ಮಕ್ಕಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದರು. ಎಚ್ಚರಗೊಂಡಾಗ ಎಲ್ಲರೂ ರಕ್ತದ ಮಡುವಿನಲ್ಲಿ ಮಲಗಿದ್ದರು. ನನ್ನ ಮೇಲೂ ಹಲ್ಲೆ ನಡೆಸಿದ್ದು, ಭಯದಲ್ಲಿ ಹೇಗೋ ಅಲ್ಲಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡೆ" ಎಂದು ತಾರಕೇಶ್ವರ್ ಸಿಂಗ್ ಅವರ ಪತ್ನಿ ಹೇಳಿದರು.
"ಗಾಯಾಳು ಮಹಿಳೆಯ ಹೇಳಿಕೆ ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ರಸೂಲ್‌ಪುರ ನಿವಾಸಿಗಳಾದ ಸುಧಾಂಶು ಕುಮಾರ್ ಅಲಿಯಾಸ್ ರೋಷನ್ ಮತ್ತು ಅಂಕಿತ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಿಚಾರಿಸಿದಾಗ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಘಟನೆಗೆ ಬಳಸಿದ್ದ ಚಾಕು ವಶಪಡಿಸಿಕೊಳ್ಳಲಾಗಿದೆ" ಎಂದು ಸರನ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಕಾಲುವೆಯಲ್ಲಿ ಸಿಕ್ಕಿಂ ಮಾಜಿ ಸಚಿವನ ಶವ ಪತ್ತೆ - R C Poudyal