ನವದೆಹಲಿ: ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‌ಕೆವಿವೈ) ಅಡಿಯಲ್ಲಿ ಕರ್ನಾಟಕ ಸರ್ಕಾರಕ್ಕೆ 2023-24ರ ಹಣಕಾಸು ವರ್ಷದ 3ನೇ ಕಂತಿನ 235.14 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಕೃಷಿ ವಿಕಾಸ ಯೋಜನೆಯಡಿ ಈ ಮೊತ್ತವನ್ನು ರಾಜ್ಯ ಸರ್ಕಾರವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಡಿಪಿಆರ್, ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ, ಮಳೆಯಾಶ್ರಿತ ಪ್ರದೇಶ ಅಭಿವೃದ್ಧಿ, ಪರಂಪರಾಗತ ಕೃಷಿ ವಿಕಾಸ ಯೋಜನೆ, ಕೃಷಿ ಯಾಂತ್ರೀಕರಣದ ಉಪ ಮಿಷನ್, ಪ್ರತಿ ಹನಿ, ಹೆಚ್ಚು ಬೆಳೆ, ಕೃಷಿ ಅರಣ್ಯ ಮತ್ತು ಬೆಳೆ ವೈವಿಧ್ಯೀಕರಣ ಕಾರ್ಯಕ್ರಮಕ್ಕೆ ಬಳಸಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಅನುದಾನ ಯಾವುದಕ್ಕೆ ಬಳಕೆ?: ಈ ಅನುಮೋದಿಸಲಾದ ಮೊತ್ತವನ್ನು ಗೋದಾಮು ನಿರ್ಮಾಣ, ನೀರು ಕೊಯ್ಲು ರಚನೆ, ಪ್ರಾಥಮಿಕ ಪ್ರಾತ್ಯಕ್ಷಿಕೆ ಘಟಕಗಳ ಸ್ಥಾಪನೆ, ಟ್ರಾಕ್ಟರ್‌ಗಳು, ಪವರ್ ಟಿಲ್ಲರ್‌ಗಳು ಮತ್ತು ಡ್ರೋನ್‌ಗಳ ಖರೀದಿ, ಸಮಗ್ರ ಕೃಷಿಯ ಉತ್ತೇಜನ, ಮಣ್ಣಿನ ಆರೋಗ್ಯ ಫಲವತ್ತತೆ ಮತ್ತು ಕಸ್ಟಮ್ ನೇಮಕ ಕೇಂದ್ರಗಳು ಸೇರಿ ಕೃಷಿ ವಲಯದ ಮೂಲಸೌಕರ್ಯ ಸುಧಾರಣೆಗೆ ಬಳಸಲಾಗುವುದು ಎಂದೂ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕರ್ನಾಟಕದಲ್ಲಿ ರೈತರ ಕಲ್ಯಾಣಕ್ಕಾಗಿ ಎಲ್ಲ ಘಟಕಗಳನ್ನು ಅನುಷ್ಠಾನಗೊಳಿಸಲು ರಾಜ್ಯಕ್ಕೆ ಆರ್‌ಕೆವಿವೈ ಅಡಿಯಲ್ಲಿ 2023-24ನೇ ಸಾಲಿಗೆ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಒಟ್ಟು 761.89 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ. ಇತ್ತೀಚೆಗೆ ಜನವರಿ 25ರಂದು ರಾಜ್ಯ ಸರ್ಕಾರಕ್ಕೆ ಕೇಂದ್ರವು 178.65 ಕೋಟಿಗಳ ಹೆಚ್ಚುವರಿ ಹಂಚಿಕೆಗೆ ಅನುಮೋದನೆ ನೀಡಿದೆ. ಆರ್‌ಕೆವಿವೈ ಯೋಜನೆಯಡಿ ಒಟ್ಟು 583.24 ಕೋಟಿ ರೂ.ಗಳಾಗಿದೆ ಎಂದಿದ್ದಾರೆ.
2023-24ನೇ ಸಾಲಿಗೆ ಹಂಚಿಕೆಯಾದ ಒಟ್ಟು 761.89 ಕೋಟಿಗಳಲ್ಲಿ 526.75 ಕೋಟಿ ಬಿಡುಗಡೆ ಮಾಡಲಾಗಿದೆ. ಉಳಿದ ಬಾಕಿ ಮೊತ್ತವನ್ನು ಈಗಾಗಲೇ ರಾಜ್ಯಕ್ಕೆ ಬಿಡುಗಡೆ ಮಾಡಿದ ಮೊತ್ತವನ್ನು ಬಳಸಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಪಿಎಸ್ಎಸ್ ಅಡಿಯಲ್ಲಿ ಕಡಲೆ ಖರೀದಿ, ಕರ್ನಾಟಕ ರಾಜ್ಯದಲ್ಲಿ ಖರೀದಿಗೆ ಬೆಲೆ ಬೆಂಬಲ ಯೋಜನೆಯಡಿ ಕಡಲೆ (ಚನ್ನಾ) ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆಯನ್ನು ನೀಡಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಇದನ್ನೂ ಓದಿ: ಒಪಿಎಸ್ ಮರುಜಾರಿ ಸೇರಿ ಹಲವು ಬೇಡಿಕೆ: ಸಿದ್ದರಾಮಯ್ಯ ಬಜೆಟ್ನಲ್ಲಿ ಈಡೇರುತ್ತಾ ಸರ್ಕಾರಿ ನೌಕರರ ನಿರೀಕ್ಷೆ?