ನವದೆಹಲಿ: ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕ 400 ಅಂಕಗಳನ್ನು ದಾಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ. ಗಣರಾಜ್ಯೋತ್ಸವಕ್ಕೂ ಮುನ್ನಾದಿನ ದೆಹಲಿಯಲ್ಲಿ ತೀವ್ರ ಚಳಿ ಇದ್ದು, ದಟ್ಟ ಮಂಜು ಕವಿದ ವಾತಾವರಣ ಮುಂದುವರೆದಿದೆ. ಗುರುವಾರ ಬೆಳಿಗ್ಗೆ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.
ಇಂಡಿಯಾ ಗೇಟ್, ಆನಂದ್ ವಿಹಾರ್ ಸೇರಿದಂತೆ ನಗರದ ಪ್ರಮುಖ ಪ್ರದೇಶದಲ್ಲಿ ದಟ್ಟವಾದ ಮಂಜಿನಿಂದ ಗೋಚರತೆ ಕ್ಷೀಣಿಸಿದೆ. ಅನೇಕ ರೈಲು, ವಿಮಾನಗಳ ಹಾರಾಟ ವಿಳಂಬವಾಗಿದೆ. ಈ ರೀತಿಯ ವಾತಾವರಣ ನಾಳೆಯೂ ಮುಂದುವರೆಯಲಿದ್ದು, 7 ಡಿಗ್ರಿ ಸೆಲ್ಸಿಯಸ್ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಟ್ಟ ಮಂಜಿನೊಂದಿಗೆ ಭಾರಿ ಚಳಿಯಿಂದ ಉತ್ತರದ ಹಲವು ರಾಜ್ಯಗಳು ತತ್ತರಿಸುತ್ತಿವೆ. ದೆಹಲಿಯಲ್ಲಿ 180 ವಸತಿರಹಿತರು ಸಾವನ್ನಪ್ಪಿದ್ದಾರೆ ಎಂದು ಆಮ್ ಆದ್ಮಿ ನೇತೃತ್ವದ ಸರ್ಕಾರ ಮಾಹಿತಿ ನೀಡಿದೆ.
ಸದ್ಯ ದೆಹಲಿಯ ವಾಯು ಗುಣಮಟ್ಟ ಗಂಭೀರ ಮಟ್ಟದಲ್ಲಿ ಕಳಪೆಯಾಗಿದ್ದು, ಗ್ಯಾಸ್ ಚೆಂಬರ್ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಇನ್ನೊಂದು ದಿನ ಪರಿಸ್ಥಿತಿ ವೀಕ್ಷಿಸಿ ಹಂತ 3ರ ಅಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ (ಜಿಆರ್ಎಪಿ) ಎಂದು ಕರೆಯಲಾಗುವ ಕೇಂದ್ರದ ವಾಯು ಮಾಲಿನ್ಯ ನಿಯಂತ್ರಣ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದರಿಂದ ಪರಿಸ್ಥಿತಿ ಸುಧಾರಿಸಬಹುದು ಹೇಳಲಾಗುತ್ತಿದೆ.
ಜಿಆರ್ಎಪಿ ಕಾರ್ಯಾಚರಣೆ ವಾಯು ಗುಣಮಟ್ಟ ನಿರ್ವಹಣೆ ಆಯೋಗದ ಉಪಸಮಿತಿ ಬುಧವಾರ ಸಭೆ ನಡೆಸಿದೆ. ಈ ವೇಳೆ ಐಎಂಡಿ ಸದ್ಯದ ವಾಯು ಗುಣಮಟ್ಟದ ಪರಿಸ್ಥಿತಿ ಮತ್ತು ಹವಾಮಾನ ಮುನ್ಸೂಚನೆ ಪರಿಸ್ಥಿತಿಯ ಜೊತೆಗೆ ಯೋಜಿತ ವಾಯು ಗುಣಮಟ್ಟದ ಸೂಚ್ಯಂಕವನ್ನು ಪಡೆದಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈಗಾಗಲೇ ಜಾರಿಯಲ್ಲಿರುವ ಜಿಆರ್ಎಪಿಯ 1 ಮತ್ತು 2ನೇ ಅಡಿಯಲ್ಲಿ ತಡೆಗಟ್ಟುವಿಕೆ ಮತ್ತು ನಿರ್ಬಂಧಿತ ಕ್ರಮಗಳು ಜಾರಿಯಲ್ಲಿರುತ್ತದೆ. ಇದರ ಜೊತೆಗೆ ಇದೀಗ ದೆಹಲಿಯ ಮತ್ತು ಎನ್ಸಿಆರ್ನಲ್ಲಿ 3ನೇ ಹಂತದಲ್ಲಿ ಅಗತ್ಯವಿಲ್ಲದ ಕಟ್ಟಡ ನಿರ್ಮಾಣ ಕಾಮಗಾರಿ, ಬಿಎಸ್3 ಪೆಟ್ರೋಲ್ ಮತ್ತು ಬಿಎಸ್4 ಡೀಸೆಲ್ ನಾಲ್ಕು ಚಕ್ರದ ವಾಹನಗಳ ಮೇಲೆ ನಿರ್ಬಂಧವಿದೆ.
ವಾಯುಗುಣಮಟ್ಟ 0ಯಿಂದ 100 ಉತ್ತಮವಾದರೆ, 100ರಿಂದ 200 ಸಾಧಾರಣ, 200ರಿಂದ 300 ಕಳಪೆ, 300ರಿಂದ 400 ತೀವ್ರ ಕಳಪೆ, 400ರಿಂದ 500 ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ಗಂಭೀರ ಮಟ್ಟದ ಕಳಪೆ ಎಂದು ಪರಿಗಣಿಸಲಾಗಿದೆ.(ಎಎನ್ಐ)
ಇದನ್ನೂ ಓದಿ: ಅಯೋಧ್ಯಾಧೀಶ ರಾಮಚಂದ್ರನ ದರ್ಶನಕ್ಕೆ ಮುಗಿಬಿದ್ದ ಭಕ್ತರು: ದರ್ಶನ ಅವಧಿ ರಾತ್ರಿ 11 ರವರೆಗೆ ವಿಸ್ತರಣೆ