ಮುಂಬೈ: ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿ ಬಂಡಾಯ ಅಭ್ಯರ್ಥಿ, ಉತ್ತರ ಮಹಾರಾಷ್ಟ್ರದ ಜಲಗಾಂವ್ ಸಂಸದ ಉನ್ಮೇಶ್ ಪಾಟೀಲ್ ಅವರು ಬುಧವಾರ ಪ್ರತಿಪಕ್ಷ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಟಿಬಿ)ಗೆ ಸೇರ್ಪಡೆಯಾದರು. ಪಾಟೀಲ್ ಅವರು ತಮ್ಮ ಅನುಯಾಯಿಗಳೊಂದಿಗೆ ಮುಂಬೈನ ಉಪನಗರದಲ್ಲಿರುವ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸ ಮಾತೋಶ್ರೀಯಲ್ಲಿ ಶಿವಸೇನೆ ಪಕ್ಷಕ್ಕೆ ಸೇರಿದರು. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯಲ್ಲಿ ಬಂಡಾಯದ ಕೂಗು ಕೇಳಿಬಂದಿದೆ. ಠಾಕ್ರೆ ಗುಂಪಿಗೆ ಸೇರ್ಪಡೆಯಾಗಿರುವ ಉನ್ಮೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಜಲಗಾಂವ್ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲು ಪಕ್ಷ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಬಿಜೆಪಿ ಸಂಸದ ಉನ್ಮೇಶ್ ಪಾಟೀಲ್ ಮಂಗಳವಾರ ಶಿವಸೇನೆ(ಯುಟಿಬಿ) ನಾಯಕ ಸಂಜಯ್ ರಾವತ್ ಅವರನ್ನು ಭೇಟಿ ಮಾಡಿದ್ದರು. ಪಾಟೀಲ್ ಮುಂದಿನ ರಾಜಕೀಯ ನಡೆಯ ಬಗ್ಗೆ ಕುತೂಹಲ ಮೂಡಿತ್ತು. ಇದೀಗ ಆ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಈ ಬಾರಿ ಮಹಾ ವಿಕಾಸ್ ಅಘಾಡಿ (MVA) ಅಡಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ವಿರುದ್ಧ ಹೋರಾಡಲಿದೆ.
ಬಿಜೆಪಿ ಈ ಬಾರಿ ಜಲಗಾಂವ್ನಲ್ಲಿ ಉನ್ಮೇಶ್ ಪಾಟೀಲ್ ಬದಲಿಗೆ ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಸ್ಮಿತಾ ವಾಘ್ ಅವರಿಗೆ ಲೋಕಸಭಾ ಟಿಕೆಟ್ ನೀಡಿದೆ. ಸ್ಮಿತಾ ವಾಘ್ ಈ ಹಿಂದೆ ಮಹಾರಾಷ್ಟ್ರ ಬಿಜೆಪಿ ಮಹಿಳಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಸಂಸದ ಉನ್ಮೇಶ್ ಪಾಟೀಲ್ ಮಾತನಾಡಿ, "ಬಿಜೆಪಿಯವರು ನಾನು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಬೆಲೆ ನೀಡಲಿಲ್ಲ. ಯಾವುದೇ ಗುಂಪು, ಜಾತಿ, ಧರ್ಮ ನೋಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ವಿನಿಮಯ ಹಾಗೂ ಸೇಡಿನ ರಾಜಕಾರಣದಿಂದ ನಾನು ಬೇಸತ್ತಿದ್ದೇನೆ. ಶಾಸಕ ಹಾಗೂ ಸಂಸದನಾಗುವುದು ನನ್ನ ಗುರಿಯಾಗಿರಲಿಲ್ಲ. ಬಿಜೆಪಿಯಲ್ಲಿ ನಡೆಯುತ್ತಿರುವ ಪಾಪದ ಕೆಲಸಗಳಿಂದ ನಾವು ಶ್ರೀಮಂತರಾಗಬಾರದು. ಪಕ್ಷದಲ್ಲಿ ನಮಗೆ ಗೌರವವಿಲ್ಲ. ಆದರೆ ಕನಿಷ್ಠ ಸ್ವಾಭಿಮಾನದಿಂದ ಬದುಕಬೇಕು. ಕಾರ್ಯಕರ್ತರಿಗೆ ಅಗೌರವ ತೋರಲಾಗುತ್ತಿದೆ. ಇದು ಅಪಾಯಕಾರಿ. ಉತ್ತರ ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಬೆಳೆಸಿ ಜ್ಯೋತಿ ಬೆಳಗಿಸಲು ಹೊರಟಿದ್ದೇವೆ" ಎಂದರು.
ಇದನ್ನೂ ಓದಿ: ಇಬ್ಬರ ನಡುವೆ ಇದ್ದ ಮುನಿಸು ಅಂತ್ಯ; ಮೋದಿಗಾಗಿ ಒಂದಾದ ವಿಶ್ವನಾಥ್-ಸುಧಾಕರ್ - Lok Sabha election 2024