ನವದೆಹಲಿ: ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ರಷ್ಯಾ ಪ್ರಜೆಯ ಕೊಲೆ ಪ್ರಕರಣವನ್ನು ದೆಹಲಿ ಪೊಲೀಸರು ಬೇಧಿಸಿದ್ದಾರೆ. ಈ ಸಂಬಂಧ 41 ವರ್ಷದ ಗೌರವ್ ಕಿಶೋರ್ ಎಂಬಾತನನ್ನು ಬಂಧಿಸಲಾಗಿದೆ. ವಿದೇಶಿ ವ್ಯಕ್ತಿಯನ್ನು ಆರೋಪಿಯು ಕೊಲೆ ಮಾಡಿ ದೇಹವನ್ನು ಕತ್ತರಿಸಿ, ಅದರ ಭಾಗಗಳನ್ನು ಮೂರು ಸ್ಥಳಗಳಲ್ಲಿ ಎಸೆದಿದ್ದು ಬಯಲಾಗಿದೆ.
ಡಿಸೆಂಬರ್ 21 ಮತ್ತು 22ರಂದು ಹೊರ ದೆಹಲಿಯ ರಣಹೌಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ವಿವಿಧ ಸ್ಥಳಗಳಲ್ಲಿ ಪಾಲಿಥೀನ್ ಚೀಲಗಳಲ್ಲಿ ದೇಹದ ಭಾಗಗಳು ಪತ್ತೆಯಾಗಿದ್ದವು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಗೌರವ್ ಕಿಶೋರ್ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ, ಹಂತಕನು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಡಿಸೆಂಬರ್ 20ರಂದು ರಷ್ಯಾದ ಪ್ರಜೆಯನ್ನು ಕೊಲೆ ಮಾಡಿರುವುದಾಗಿ ಬಾಯ್ಬಿಟಿದ್ದಾನೆ.
ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ವಿದೇಶಿಗ: ಈ ಬಗ್ಗೆ ಡಿಸಿಪಿ ಜಿಮ್ಮಿ ಚೀರಂ ಮಾಹಿತಿ ನೀಡಿ, ಕೊಲೆಯಾದ ರಷ್ಯಾದ ಪ್ರಜೆ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ. ಅಲ್ಲದೇ, ಈತ ಡ್ರಗ್ಸ್ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿದ್ದ. ಇದೇ ಅವಧಿಯಲ್ಲಿ ಗೌರವ್ ಕೂಡ ಕೊಲೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದ. ಜೈಲಿನಲ್ಲಿ ಇವರಿಬ್ಬರೂ ಸ್ನೇಹಿತರಾಗಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ ರಷ್ಯಾದ ಪ್ರಜೆಯು ಬಲವಂತದಿಂದ ಗೌರವ್ಗೆ ಸೇರಿದ ದೆಹಲಿಯ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದ ಎಂಬುವುದಾಗಿ ತನಿಖೆಯಲ್ಲಿ ಗೊತ್ತಾಗಿದೆ ಎಂದು ತಿಳಿಸಿದರು.
ರಷ್ಯಾ ಪ್ರಜೆಯಿಂದ ಗೌರವ್ ತೊಂದರೆಗೊಳಗಾಗಿದ್ದ. ಇದರಿಂದಲೇ ಬೇಸತ್ತು ಕತ್ತು ಹಿಸುಕಿ ಈ ಕೊಲೆ ಮಾಡಿದ್ದ. ನಂತರ ದೇಹದ ಭಾಗಗಳನ್ನು ಕತ್ತರಿಸಿ, ಅವುಗಳನ್ನು ವಿವಿಧೆಡೆ ಪಾಲಿಥಿನ್ ಚೀಲಗಳಲ್ಲಿ ವಿಲೇವಾರಿ ಮಾಡಿದ್ದ. ಕೊಲೆಗೆ ಬಳಸಿದ್ದ ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಮನೆಯಿಂದ ವಿದೇಶಿಗನ ವೀಸಾ ಮತ್ತು ಪಾಸ್‌ಪೋರ್ಟ್‌ನ ನಕಲು ಪ್ರತಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಷ್ಯಾದ ರಾಯಭಾರ ಕಚೇರಿಗೆ ಪತ್ರ ಬರೆದಿರುವುದಾಗಿಯೂ ದೆಹಲಿ ಪೊಲೀಸರು ತಿಳಿಸಿದ್ದಾರೆ. ಡಿಎನ್‌ಎ ಪರೀಕ್ಷೆಗಾಗಿ ರಷ್ಯಾದಲ್ಲಿ ಮೃತನ ಕುಟುಂಬವನ್ನು ಸಂಪರ್ಕಿಸಲು ಸಹಾಯ ಮಾಡಲು ರಾಯಭಾರ ಕಚೇರಿಯನ್ನು ಕೋರಲಾಗಿದೆ. ಮೃತದೇಹವನ್ನು ಗುರುತಿಸಿದರೆ, ಶವವನ್ನು ರಾಯಭಾರ ಕಚೇರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದಾಗ್ಯೂ, ಈ ಬಗ್ಗೆ ಪ್ರತಿಕ್ರಿಯಿಸಲು ರಷ್ಯಾದ ರಾಯಭಾರ ಕಚೇರಿ ನಿರಾಕರಿಸಿದೆ.
ಇದನ್ನೂ ಓದಿ: ತಂದೆಗೆ ಬೆಂಕಿ ಹಚ್ಚಿ, ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ ಮಗ - son killed his father