ನವದೆಹಲಿ: ದೆಹಲಿಯ ಹಳೆ ರಾಜಿಂದರ್ ನಗರದಲ್ಲಿರುವ ರಾವ್ಸ್ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಹಡಿಗೆ ಮಳೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಖಡಕ್ ಕ್ರಮ ಕೈಗೊಂಡಿದ್ದಾರೆ. ರಾಜಿಂದರ್ ನಗರ ಠಾಣೆ ಪೊಲೀಸರು ಕೋಚಿಂಗ್ ಕೇಂದ್ರದ ವಿರುದ್ಧ ಪ್ರಕರಣ ದಾಖಲಿಸಿದ್ದು, ಮಾಲೀಕ ಹಾಗು ಸಂಯೋಜಕರನ್ನು ಬಂಧಿಸಿದ್ದಾರೆ.
ನೀರು ತುಂಬಿದ ನೆಲಮಾಳಿಗೆಯಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿಗಳನ್ನು ಶ್ರೇಯಾ ಯಾದವ್ (ಅಂಬೇಡ್ಕರ್ ನಗರ, ಉತ್ತರ ಪ್ರದೇಶ), ತಾನ್ಯಾ ಸೋನಿ (ತೆಲಂಗಾಣ) ಮತ್ತು ನವೀನ್ ಡೆಲ್ವಿನ್ (ಎರ್ನಾಕುಲಂ, ಕೇರಳ) ಎಂದು ಗುರುತಿಸಲಾಗಿದೆ.
I'm one of survivor of this horrible incident, within 10 min basement was filled it was 6.40 we called police and ndma's but they reach after 9 PM till then my 3 #UPSCaspirants mates lost their lives 😭 3 are hospitalized pray for them🙏
— Hirdesh Chauhan🇮🇳 (@Hirdesh79842767) July 28, 2024
who cares our life😭#RajenderNagar#upsc pic.twitter.com/hgogun1ehF
ದೆಹಲಿ ಕೇಂದ್ರ ಡಿಸಿಪಿ ಎಂ.ಹರ್ಷವರ್ಧನ್ ಭಾನುವಾರ ಈ ಕುರಿತು ಮಾಹಿತಿ ನೀಡಿದರು. "ಕೋಚಿಂಗ್ ಸೆಂಟರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105, 106 (1), 152, 290 ಮತ್ತು 35ರ ಅಡಿಯಲ್ಲಿ ರಾಜಿಂದರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕೋಚಿಂಗ್ ಕೇಂದ್ರದ ಮಾಲೀಕರು, ಸಂಯೋಜಕರು ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದರು.
"ನೆಲಮಾಳಿಗೆಯಲ್ಲಿ ನೀರು ತುಂಬುತ್ತಿರುವ ಬಗ್ಗೆ ಮಾಹಿತಿ ಪಡೆದ ನಂತರ ರಾತ್ರಿಯಿಂದಲೇ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ದೆಹಲಿ ಪೊಲೀಸ್, ದೆಹಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಎನ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಈ ಸಂದರ್ಭದಲ್ಲಿ ಮೂರು ವಿದ್ಯಾರ್ಥಿಗಳ ಮೃತದೇಹಗಳನ್ನು ಪತ್ತೆ ಹಚ್ಚಿದ್ದು, ಕುಟುಂಬದವರಿಗೆ ಮಾಹಿತಿ ನೀಡಲಾಯಿತು" ಎಂದು ಡಿಸಿಪಿ ತಿಳಿಸಿದರು.
ನೆಲಮಾಳಿಗೆಯು ಸುಮಾರು 12 ಅಡಿಗಳಷ್ಟು ನೀರಿನಿಂದ ತುಂಬಿಕೊಂಡಿತ್ತು. ಮಳೆ ಮತ್ತು ಚರಂಡಿ ನೀರು ದಿಢೀರ್ ತುಂಬಿದ್ದರಿಂದ ಗ್ರಂಥಾಲಯದಲ್ಲಿ ಮೂವರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು.
ಇದನ್ನೂ ಓದಿ: ದೆಹಲಿ: IAS ಕೋಚಿಂಗ್ ಕೇಂದ್ರದ ನೆಲಮಾಳಿಗೆಗೆ ನುಗ್ಗಿದ ನೀರು; ಮೂವರು ವಿದ್ಯಾರ್ಥಿಗಳು ಸಾವು - Coaching Centre Flooded