ನವದೆಹಲಿ: ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಎಲ್ಲರೊಂದಿಗೆ ಕುಣಿಯುತ್ತಿರುವಾಗಲೇ ಹೆಡ್ ಕಾನ್ಸ್ಟೇಬಲ್ ಕುಸಿದು ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ದೆಹಲಿಯಲ್ಲಿ ನಡೆದಿದೆ.
ಉತ್ತರ ದೆಹಲಿಯ ರೂಪನಗರ ಪೊಲೀಸ್ ಠಾಣೆಯಲ್ಲಿ 28ರ ಬುಧವಾರ ರಾತ್ರಿ SHO ಅವರ ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಎಲ್ಲರೂ ಎಂಜಾಯ್ ಮಾಡುತ್ತಾ, ಹರಟೆ ಹೊಡೆಯುತ್ತಾ ಸಂಭ್ರಮಿಸುತ್ತಿದ್ದರು. ಈ ವೇಳೆ ದೆಹಲಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರವಿಕುಮಾರ್ ಎಂಬುವವರು ಡ್ಯಾನ್ಸ್ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಎದೆನೋವು ಎಂದು ಹೇಳಿದ್ದಾರೆ. ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ರವಿಕುಮಾರ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ರವಿಕುಮಾರ್ ಅವರು ಸಾಯುವ ಮುನ್ನದ ಡ್ಯಾನ್ಸ್ ವಿಡಿಯೋ ರೆಕಾರ್ಡ್ ಮಾಡಲಾಗಿದ್ದು ಎಲ್ಲೆಡೆ ವೈರಲಾಗುತ್ತಿದೆ. ಪೊಲೀಸ್ ಅಧಿಕಾರಿಗಳಿಂದ ಬಂದ ಮಾಹಿತಿಯ ಪ್ರಕಾರ ಮೃತ ರವಿಕುಮಾರ್ ಹೃದ್ರೋಗದಿಂದ ಬಳಲುತ್ತಿದ್ದರು. ಇವರು 45 ದಿನಗಳ ಹಿಂದೆ ಆಂಜಿಯೋಗ್ರಫಿ ಮಾಡಿಸಿಕೊಂಡಿದ್ದರಂತೆ.
ಉತ್ತರ ಪ್ರದೇಶದ ಬಾಗ್‌ಪತ್ ನಿವಾಸಿಯಾಗಿರುವ ರವಿಕುಮಾರ್ ಅವರು ಉತ್ತರ ದೆಹಲಿಯ ರೂಪನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಕಣ್ಣೆದುರೇ ಸಂತೋಷದಿಂದ ನಲಿಯುತ್ತಿದ್ದ ವ್ಯಕ್ತಿಯ ಹಠಾತ್ ಸಾವು ವಿದಾಯ ಕೂಟವನ್ನು ದುಃಖದ ಕೂಟವನ್ನಾಗಿ ಬದಲಾಯಿಸಿತು.
ಇದನ್ನೂ ಓದಿ: ತ್ರಿಪುರಾ ಪ್ರವಾಹ; ಇಡೀ ರಾಜ್ಯವನ್ನು ನೈಸರ್ಗಿಕ ವಿಕೋಪ ಎಂದು ಘೋಷಿಸಿದ ರಾಜ್ಯ ಸರ್ಕಾರ - TRIPURA FLOOD