ನವದೆಹಲಿ: ಪ್ರಮಾಣ ವಚನ ಸ್ವೀಕಾರ ಸಮಾರಂಭ ವೇಳೆ ಕಾಣಿಸಿಕೊಂಡ ಪ್ರಾಣಿ ಬಗ್ಗೆ ಇದ್ದ ಎಲ್ಲ ಸಂಶಯಗಳಿಗೆ ದೆಹಲಿ ಪೊಲೀಸರು ಸ್ಪಷ್ಟನೆ ಕೊಟ್ಟಿದ್ದಾರೆ. ಪ್ರಮಾಣವಚನ ಸಮಾರಂಭದ ವೇಳೆ ಕಂಡು ಬಂದ ಪ್ರಾಣಿ, ಸಾಮಾನ್ಯ ಮನೆಯ ಬೆಕ್ಕು ಎಂದು ದೆಹಲಿ ಪೊಲೀಸರು ಸೋಮವಾರ ಸ್ಪಷ್ಟಪಡಿಸಿದ್ದಾರೆ, ಅದು ಕಾಡು ಪ್ರಾಣಿ ಎಂಬ ಗಾಳಿ ಸುದ್ದಿಯನ್ನು ಪೊಲೀಸರು ಅಲ್ಲಗಳೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಚಿರತೆಯಂತಹ ಪ್ರಾಣಿ ಕಂಡು ಬಂದಿತ್ತು. ಈ ಸುದ್ದಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
"ಕೆಲವು ಮಾಧ್ಯಮ ವಾಹಿನಿಗಳು ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರದ ವೇಳೆ ಈ ಪ್ರಾಣಿಯನ್ನು ಸೆರೆ ಹಿಡಿದಿದ್ದವು, ಇದೊಂದು ಕಾಡುಪ್ರಾಣಿ ಇರಬಹುದು ಎಂದು ಅವರೆಲ್ಲ ಶಂಕಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಸಮಾರಂಭದ ವೇಳೆ ಅಲ್ಲಿ ಕಾಡುಪ್ರಾಣಿಗಳು ನುಗ್ಗುವುದು ಅಸಾಧ್ಯ. ಇಂತಹ ಆಧಾರ ರಹಿತ ವದಂತಿಗಳನ್ನು ನಂಬಬೇಡಿ ಎಂದು ದೆಹಲಿ ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ನಲ್ಲಿ ಮನವಿ ಮಾಡಿದ್ದಾರೆ.
"ವಾಹಿನಿಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವ ಈ ಸುದ್ದಿ ನಿಜವಲ್ಲ, ಕ್ಯಾಮರಾದಲ್ಲಿ ಸೆರೆಹಿಡಿಯಲಾದ ಪ್ರಾಣಿ ಮನೆಯ ಬೆಕ್ಕು. ದಯವಿಟ್ಟು ಇಂತಹ ಕ್ಷುಲ್ಲಕ ವದಂತಿಗಳಿಗೆ ನಂಬಬೇಡಿ " ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಬಿಜೆಪಿ ಸಂಸದರಾದ ದುರ್ಗಾದಾಸ್ ಉಯಿಕೆ ಮತ್ತು ಅಜಯ್ ತಮ್ತಾ ಪ್ರಮಾಣ ವಚನ ಸ್ವೀಕರಿಸುತ್ತಿರುವಾಗ ಈ ಪ್ರಾಣಿ ಕಾಣಿಸಿಕೊಂಡಿದೆ. ಅಂತರ್ಜಾಲದಲ್ಲಿ ಈ ಬಗೆಗಿನ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ, ನೆಟಿಜನ್‌ಗಳು ಮಿಶ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದನ್ನು ಚಿರತೆ ಎಂದು ಕರೆದರೆ, ಮತ್ತೊಬ್ಬರು ಅದನ್ನು ಸಾಕಿದ ಬೆಕ್ಕು ಇರಬೇಕು ಎಂದಿದ್ದರು.
ಇದನ್ನು ಓದಿ: ಮೋದಿ 3.0 ಕ್ಯಾಬಿನೆಟ್: ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ - Allocation of Portfolios