ನವದೆಹಲಿ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಿರಸ್ಕೃತಗೊಳಿಸಿದೆ. ಅರವಿಂದ ಕೇಜ್ರಿವಾಲ್ ಅವರ ಬಂಧನವು ಕಾನೂನು ನಿಬಂಧನೆಗೆ ವಿರುದ್ದವಾಗಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಹೀಗಾಗಿ ಅವರ ರಿಮ್ಯಾಂಡ್ ಅನ್ನು ಕಾನೂನು ಬಾಹಿರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಅವರು ತೀರ್ಪಿನಲ್ಲಿ ಹೇಳಿದ್ದಾರೆ.
ತನಿಖೆ ಹೇಗೆ ನಡೆಸಬೇಕು ಎಂಬುದನ್ನು ನಿರ್ಧರಿಸುವುದು ಆರೋಪಿಗಳ ಕೆಲಸವಲ್ಲ: ತನಿಖಾ ಸಂಸ್ಥೆ ಯಾರನ್ನು ಬೇಕಾದರೂ ತನಿಖೆ ನಡೆಸಬಹುದು ಎಂದು ನ್ಯಾಯಾಲಯ ಹೇಳಿದೆ. ಅಮಾನತುಲ್ಲಾ ಖಾನ್ ಅವರ ಪ್ರಕರಣದ ಉದಾಹರಣೆಯನ್ನು ಉಲ್ಲೇಖಿಸಿದ ನ್ಯಾಯಾಲಯ, ಸಾರ್ವಜನಿಕ ವ್ಯಕ್ತಿಗಳನ್ನು ಸಹ ಬಿಡಬಾರದು ಎಂದು ಹೇಳಿದೆ. ನಾವು ವಿಚಾರಣಾ ನ್ಯಾಯಾಲಯವನ್ನು ಬದಲಿಸಲು ಸಾಧ್ಯವಿಲ್ಲ. ಕೇಜ್ರಿವಾಲ್ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದಿತ್ತು ಎಂಬ ವಾದವನ್ನು ತಿರಸ್ಕರಿಸಲಾಗಿದೆ. ತನಿಖೆ ಹೇಗೆ ನಡೆಸಬೇಕು ಎಂಬುದನ್ನು ನಿರ್ಧರಿಸುವುದು ಆರೋಪಿಗಳ ಕೆಲಸವಲ್ಲ. ಇದು ಆರೋಪಿಯ ಅನುಕೂಲಕ್ಕೆ ತಕ್ಕಂತೆ ಇರುವಂತಿಲ್ಲ ಎಂದಿದೆ.
ನ್ಯಾಯಾಲಯವು ಕಾನೂನಿಗೆ ಬದ್ಧ : ಕೇಜ್ರಿವಾಲ್ ಮಾರ್ಚ್‌ನಿಂದ ಸಮನ್ಸ್ ನಿರ್ಲಕ್ಷಿಸುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಹೀಗಿರುವಾಗ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಂಧನ ಮಾಡಲಾಗಿದೆ ಎಂದು ಹೇಳಲಾಗದು. ನ್ಯಾಯಾಲಯವು ಕಾನೂನಿಗೆ ಬದ್ಧವಾಗಿದೆ, ರಾಜಕೀಯದಿಂದಲ್ಲ. ನ್ಯಾಯಾಧೀಶರು ಸಂವಿಧಾನಕ್ಕೆ ಬದ್ಧರಾಗಿದ್ದಾರೆ. ನ್ಯಾಯಾಂಗದ ಕೆಲಸವೆಂದರೆ ಕಾನೂನನ್ನು ಅರ್ಥೈಸುವುದು ಮತ್ತು ಇದರಲ್ಲಿ ಅದು ಯಾರ ಪರವಾಗಿಯೂ ನಿಲ್ಲುವುದಿಲ್ಲ, ರಾಜಕೀಯದಲ್ಲಿ ತೊಡಗುವುದಿಲ್ಲ. ರಾಜಕೀಯ ವ್ಯಕ್ತಿಗಳ ಪ್ರಕರಣಗಳಲ್ಲಿ ನ್ಯಾಯಾಲಯವು ಕಾನೂನಿನತ್ತ ಮಾತ್ರ ನೋಡಬೇಕು ಮತ್ತು ಅದಕ್ಕೆ ರಾಜಕೀಯ ಅಗತ್ಯವಿಲ್ಲ. ನ್ಯಾಯಾಲಯದ ಕಾಳಜಿ ಸಾಂವಿಧಾನಿಕ ನೈತಿಕತೆಯೇ ಹೊರತು, ರಾಜಕೀಯ ನೈತಿಕತೆಯಲ್ಲ. ಈ ಪ್ರಕರಣದಲ್ಲಿ ನ್ಯಾಯಾಲಯವು ಕಾನೂನು ಸಂಗತಿಗಳನ್ನು ಮಾತ್ರ ಪರಿಗಣಿಸಿದೆ ಎಂದಿದೆ.
ಮಾರ್ಚ್ 21 ರಿಂದ ಸಿಎಂ ಕೇಜ್ರಿವಾಲ್ ಬಂಧನ : ಕೇಜ್ರಿವಾಲ್ ಮಾರ್ಚ್ 23 ರಂದು ತಮ್ಮ ಬಂಧನವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 3 ರಂದು ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇದಕ್ಕೂ ಮೊದಲು ಏಪ್ರಿಲ್ 1 ರಂದು ರೂಸ್ ಅವೆನ್ಯೂ ಕೋರ್ಟ್ ಕೇಜ್ರಿವಾಲ್ ಅವರ ಅರ್ಜಿಯನ್ನು ತಿರಸ್ಕರಿಸಿ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಮದ್ಯ ನೀತಿ ಪ್ರಕರಣದಲ್ಲಿ ಇಡಿ ಬಂಧಿಸಿತ್ತು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಇದೀಗ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ, ಹೈಕೋರ್ಟ್ ಆದೇಶದ ಪ್ರತಿ ಕೈಗೆ ಸಿಕ್ಕ ತಕ್ಷಣ, ಆದಷ್ಟು ಬೇಗ ಸುಪ್ರೀಂನಲ್ಲಿ ಪ್ರಶ್ನಿಸುವುದಾಗಿ ಕೇಜ್ರಿವಾಲ್ ಪರ ವಕೀಲರು ಹೇಳಿದ್ದಾರೆ. ಇನ್ನು ಎಎಪಿ ಮೂಲಗಳು ಸುಪ್ರೀಂಕೋರ್ಟ್ಗೆ ಹೋಗುವುದಾಗಿ ಹೇಳಿದ್ದು, ನಮಗೆ ಅಲ್ಲಿ ನ್ಯಾಯ ಸಿಗುತ್ತದೆ ಎಂದು ವಿಶ್ವಾಸ ಕೂಡಾ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ಆಪ್ ನಾಯಕರಿಂದ ಸಾಮೂಹಿಕ ಉಪವಾಸ - AAP Collective Fast Protest