ನವದೆಹಲಿ: ದೆಹಲಿ ಮಹಿಳಾ ಆಯೋಗವನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯೆ ಹಾಗು ಆಯೋಗದ ಮಾಜಿ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
ಆಪ್‌ನಿಂದ ರಾಜ್ಯಸಭೆಗೆ ನೇಮಕಗೊಂಡ ಬಳಿಕ ಮಾಲಿವಾಲ್, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ತಾವು ಕಾರ್ಯನಿರ್ವಹಿಸಿದ್ದ ಸಂಸ್ಥೆಯನ್ನು ದೆಹಲಿ ಸರ್ಕಾರ ನಾಶ ಮಾಡಲು ಮುಂದಾಗಿದೆ. ಮಹಿಳೆಯರಿಗೆ ಸಹಾಯ ಮಾಡುವ ಉದ್ದೇಶದಿಂದ ಸ್ಥಾಪಿಸಿದ್ದ ಸಹಾಯವಾಣಿಯನ್ನೂ ನಿಷ್ಕ್ರಿಯಗೊಳಿಸುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದಿರುವ ಮಲಿವಾಲ್, ಮಹಿಳಾ ಆಯೋಗದ ಸಿಬ್ಬಂದಿಗೆ ಕಳೆದ ಆರು ತಿಂಗಳಿನಿಂದ ವೇತನ ಪಾವತಿಸಿಲ್ಲ. ಅಲ್ಲದೇ ಅದರ ಬಜೆಟ್ ಅನ್ನು ಶೇ 28.5ರಷ್ಟು ತಗ್ಗಿಸಲಾಗಿದೆ. 181 ಸಹಾಯವಾಣಿಯನ್ನು ಹಿಂಪಡೆಯಲಾಗಿದೆ. ಖಾಲಿ ಇರುವ ಆಯೋಗದ ಮುಖ್ಯಸ್ಥ ಮತ್ತು ಎರಡು ಸದಸ್ಯರ ಸ್ಥಾನವನ್ನು ತುಂಬುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ. ದಲಿತ ಸದಸ್ಯರ ಹುದ್ದೆ ಕಳೆದ 1.5 ವರ್ಷದಿಂದ ನೆನೆಗುದಿಗೆ ಬಿದ್ದಿದೆ. ನಾನು ಹೊರಹೋದ ಬಳಿಕ ಆಯೋಗವನ್ನು ಮತ್ತೊಮ್ಮೆ ದುರ್ಬಲ ಸಂಸ್ಥೆಯಾಗಿ ಮಾಡುವ ಎಲ್ಲಾ ಪ್ರಯತ್ನಗಳು ನಡೆದಿವೆ. ಮಹಿಳೆಯರ ಬಗ್ಗೆ ದೆಹಲಿ ಸರ್ಕಾರಕ್ಕೆ ಯಾಕಿಷ್ಟು ಹಗೆತನ? ಎಂದು ಬರೆದ ಪತ್ರವನ್ನು 'ಎಕ್ಸ್' ಖಾತೆಯಲ್ಲೂ ಪೋಸ್ಟ್ ಮಾಡಿದ್ದಾರೆ.
ದೆಹಲಿ ಮಹಿಳಾ ಆಯೋಗ ಪ್ರಾರಂಭಿಸಿದ್ದ ಸಹಾಯವಾಣಿಯನ್ನು ಇನ್ನು ಮುಂದೆ ದೆಹಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ನಡೆಸಲಾಗುವುದು ಎಂದು ಸಚಿವ ಕೈಲಾಶ್ ಗೆಹ್ಲೋಟ್ ತಿಳಿಸಿದ ಬೆನ್ನಲ್ಲೇ ಮಲಿವಾಲ್ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಾಲಿವಾಲ್ ಮೇಲೆ ಹಲ್ಲೆ ಪ್ರಕರಣ: ಸಿಎಂ ಕೇಜ್ರಿವಾಲ್ ಪಿಎ ಬಿಭವ್ ಬಂಧನ