ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ತಿಳಿಸಿದೆ. ಕಳೆದ ನಾಲ್ಕು ತಿಂಗಳಲ್ಲಿ ಇಡಿ ಅಧಿಕಾರಿಗಳು ಕೇಜ್ರಿವಾಲ್ ಅವರಿಗೆ ನಾಲ್ಕು ಸಮನ್ಸ್ ಜಾರಿ ಮಾಡಿದ್ದರು. ಬುಧವಾರ ಐದನೇ ಸಮನ್ಸ್ ಜಾರಿ ಮಾಡಲಾಗಿತ್ತು.
ಆದರೆ ಕೇಜ್ರಿವಾಲ್ ಇಡಿ ಮುಂದೆ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ. ಸಮನ್ಸ್ "ಕಾನೂನುಬಾಹಿರ" ಎಂದಿರುವ ಆಪ್, ಕೇಜ್ರಿವಾಲ್ ಅವರನ್ನು ಬಂಧಿಸಲು ಪದೇ ಪದೇ ನೋಟಿಸ್ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದೆ.
ಕೇಜ್ರಿವಾಲ್‌ರನ್ನು ಬಂಧಿಸುವ ಮೂಲಕ ದೆಹಲಿಯಲ್ಲಿ ತನ್ನ ಸರ್ಕಾರ ಉರುಳಿಸಲು ಬಿಜೆಪಿ ಬಯಸಿದೆ. ಎಎಪಿ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಪ್ ಹೇಳಿದೆ. ಈ ಮಧ್ಯೆ ಕೇಜ್ರಿವಾಲ್ ಇಂದು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಎಎಪಿ ನಡೆಸುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ.
ಕೇಜ್ರಿವಾಲ್‌ಗೆ 2023ರ ನವೆಂಬರ್ 2 ಮತ್ತು ಡಿಸೆಂಬರ್ 21 ಮತ್ತು ಈ ವರ್ಷದ ಜನವರಿ 3 ಮತ್ತು ಜನವರಿ 18ರಂದು ಇಡಿ ಸಮನ್ಸ್ ಜಾರಿ ಮಾಡಿತ್ತು. ಈ ಎಲ್ಲ ಸಮನ್ಸ್‌ಗೂ ಕ್ಯಾರೆನ್ನದ ಕೇಜ್ರಿವಾಲ್ ಗೈರು ಹಾಜರಾಗಿದ್ದರು. ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ದೆಹಲಿ ಸರ್ಕಾರದ 2021-22ರ ಅಬಕಾರಿ ನೀತಿಯು ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿದೆ. ಅದಕ್ಕಾಗಿ ಲಂಚ ಪಾವತಿಸಿದ ಕೆಲವು ಡೀಲರ್‌ಗಳತ್ತ ಒಲವು ತೋರಿತ್ತು ಎಂದು ಆರೋಪಿಸಲಾಗಿದೆ. ಇವೆಲ್ಲ ಆರೋಪಗಳನ್ನೂ ಎಎಪಿ ನಿರಾಕರಿಸಿದೆ.
ಈ ನೀತಿಯನ್ನು ತರುವಾಯ ರದ್ದುಗೊಳಿಸಲಾಗಿತ್ತು. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಕೇಂದ್ರೀಯ ತನಿಖಾ ದಳದ(ಸಿಬಿಐ) ತನಿಖೆಗೆ ಶಿಫಾರಸು ಮಾಡಿದ್ದರು. ನಂತರ ಇಡಿ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಭೂಮಿಗೆ ಹೆಚ್ಚಿದ ಬೇಡಿಕೆ; ಖರೀದಿಗೆ ಅನಿವಾಸಿ ಭಾರತೀಯರ ಒಲವು