ನವದೆಹಲಿ: ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯವು(ಇಡಿ) ಆರನೇ ಸಮನ್ಸ್ ಜಾರಿ ಮಾಡಿದೆ. ಫೆಬ್ರವರಿ 19 ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.
ದೆಹಲಿ ಸಿಎಂ ಇದುವರೆಗೂ ಯಾವುದೇ ಸಮನ್ಸ್‌ಗಳಿಗೆ ಉತ್ತರ ನೀಡಿಲ್ಲ. ಕೇಂದ್ರ ತನಿಖಾ ಸಂಸ್ಥೆಯ ವಿಚಾರಣೆಯಿಂದ ಪ್ರತಿ ಬಾರಿಯೂ ತಪ್ಪಿಸಿಕೊಂಡಿದ್ದಾರೆ. ಇದರ ವಿರುದ್ಧ ಇಡಿ ದೆಹಲಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅರವಿಂದ್ ಕೇಜ್ರಿವಾಲ್ ಅವರು ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ವಿಚಾರಣೆಗೆ ಹಾಜರಾಗಲು ಸೂಚಿಸಬೇಕು ಎಂದು ಕೋರಿತ್ತು.
ಸಮನ್ಸ್ಗಳನ್ನು ನಿರ್ಲಕ್ಷಿಸುತ್ತಿರುವ ದಿಲ್ಲಿ ಸಿಎಂಗೆ ನ್ಯಾಯಾಲಯ ಚಾಟಿ ಬೀಸಿದ್ದು, ಹಗರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 17ರಂದು ವಿಚಾರಣೆಗೆ ಒಳಪಡಲು ಸೂಚಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್ ಕೇಂದ್ರ ಸರ್ಕಾರ ತನ್ನ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಪ್ರಕರಣದಲ್ಲಿ ತನ್ನ ಪಾತ್ರ ಇರದಿದ್ದರೂ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನನ್ನನ್ನು ಬಂಧಿಸುವ ಯತ್ನಗಳು ನಡೆದಿವೆ ಎಂದು ಹೇಳಿದ್ದರು. ಇದರ ನಡುವೆಯೇ 6ನೇ ಸಮನ್ಸ್ ಜಾರಿ ಮಾಡಲಾಗಿದೆ.
ಯಾವಾಗೆಲ್ಲಾ ಸಮನ್ಸ್ ಜಾರಿ: ದಿಲ್ಲಿ ಸಿಎಂ ಕೇಜ್ರಿವಾಲ್ಗೆ ಈ ಹಿಂದೆ ಅಂದರೆ, 2023 ರ ನವೆಂಬರ್ 2, ಡಿಸೆಂಬರ್ 21, ಈ ವರ್ಷದ ಜನವರಿ 3, ಜನವರಿ 18 ಮತ್ತು ಫೆಬ್ರವರಿ 2 ರಂದು ತನಿಖಾ ಸಂಸ್ಥೆ ಸಮನ್ಸ್ ನೀಡಿತ್ತು. ಆದರೆ, ಕೇಜ್ರಿವಾಲ್ ಅವರು ಈ ನೋಟಿಸ್‌ಗಳನ್ನು ಕಾನೂನುಬಾಹಿರ ಎಂದು ಜರಿದಿದ್ದಾರೆ.
ಮದ್ಯ ನೀತಿ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರದ್ದೂ ಪಾತ್ರವಿದೆ ಎಂದು ಇಡಿ ತನ್ನ ಚಾರ್ಜ್ಶೀಟ್ನಲ್ಲಿ ಹೇಳಿದೆ. ರದ್ದಾದ ದೆಹಲಿ ಅಬಕಾರಿ ನೀತಿ ಕೇಸ್ನ ಆರೋಪಿಗಳು ಸಿಎಂ ಜೊತೆ ನಂಟು ಹೊಂದಿದ್ದಾರೆ. ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಮತ್ತು ಪಕ್ಷದ ಸಂವಹನ ಉಸ್ತುವಾರಿ ವಿಜಯ್ ನಾಯರ್, ಕೆಲವು ಉದ್ಯಮಿಗಳನ್ನು ಈ ಪ್ರಕರಣದಲ್ಲಿ ಇಡಿ ಬಂಧಿಸಿದೆ.
ಕೋರ್ಟ್ ಹೇಳಿದ್ದೇನು?: ಫೆ.17ರಂದು ತನ್ನ ಮುಂದೆ ಹಾಜರಾಗುವಂತೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ದೆಹಲಿ ಸರ್ಕಾರದ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ತಾನು ನೀಡಿರುವ ಸಮನ್ಸ್‌ಗಳಿಗೆ ಸ್ಪಂದಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ ಸಲ್ಲಿಸಿದ ದೂರಿನ ಮೇರೆಗೆ ನ್ಯಾಯಾಲಯ ಈ ಸಮನ್ಸ್ ಜಾರಿ ಮಾಡಿದೆ.
ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಫೆಬ್ರವರಿ 17ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ಡೆಲಿವರಿ ಬಾಯ್, ಪೋಸ್ಟ್ಮನ್ಗಳಂತೆ ದೆಹಲಿ ಪೊಲೀಸರ ಬಳಕೆ: ಕೇಂದ್ರದ ವಿರುದ್ಧ ಆಪ್ ಆರೋಪ