ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಇಂದು ಸಿಬಿಐ ಅಧಿಕಾರಿಗಳು ಅಧಿಕೃತವಾಗಿ ಬಂಧಿಸಿದ್ದಾರೆ. ಇದಕ್ಕೂ ಮೊದಲು ಸೋಮವಾರದಂದು ತಿಹಾರ್ ಜೈಲಿನಲ್ಲೇ ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದರು.
ಮಂಗಳವಾರವೂ ಮತ್ತೊಮ್ಮೆ ವಿಚಾರಣೆ ನಡೆಸಿದ್ದರು. ಬಳಿಕ ಬುಧವಾರ ವಿಚಾರಣಾ ನ್ಯಾಯಾಲಯಕ್ಕೆ ಕೇಜ್ರಿವಾಲ್ ಅವರನ್ನು ಹಾಜರು ಪಡಿಸಲು ಅನುಮತಿಯನ್ನು ಸಿಬಿಐ ಪಡೆದಿತ್ತು. ಇದೀಗ ನ್ಯಾಯಾಲಯಕ್ಕೆ ಹಾಜರು ಪಡಿಸಿ ಅಧಿಕೃತವಾಗಿ ಬಂಧಿಸಿದ್ದಾರೆ. ಮದ್ಯ ನೀತಿ ಪ್ರಕರಣದಲ್ಲಿ ಇಡಿ ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನು ಅವರ ನಿವಾಸದಿಂದ ಬಂಧಿಸಿತ್ತು. ಏಪ್ರಿಲ್ 1 ರಂದು ತಿಹಾರ್‌ಗೆ ಕಳುಹಿಸಲಾಗಿತ್ತು.
ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನನ್ನು ತಡೆ ನೀಡಿ ಹೈಕೋರ್ಟ್ ಆದೇಶಿಸಿತ್ತು. ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರಿದ್ದ ಪೀಠವು ರೋಸ್ ಅವೆನ್ಯೂ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿ ಆದೇಶ ಮಾಡಿತ್ತು.
ಇಂದು ಸುಪ್ರೀಂನಲ್ಲಿ ವಿಚಾರಣೆ: ದೆಹಲಿ ಹೈಕೋರ್ಟ್ನ ಜಾಮೀನು ತಡೆಯಾಜ್ಞೆ ಆದೇಶವನ್ನು ಪ್ರಶ್ನಿಸಿ ಕಳೆದ ಎರಡು ದಿನಗಳ ಹಿಂದೆ ಸಿಎಂ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌ವಿಎನ್ ಭಟ್ಟಿ ಮತ್ತು ಮನೋಜ್ ಮಿಶ್ರಾ ಅವರಿದ್ದ ದ್ವಿಸದಸ್ಯ ಪೀಠವು, ಹೈಕೋರ್ಟ್ ವಿಚಾರಣೆ ನಡೆಸುತ್ತಿರುವ ಹಿನ್ನೆಲೆ ತೀರ್ಪು ಪ್ರಕಟವಾಗುವವರೆಗೆ ಕಾಯ್ದಿರಲು ಸೂಚಿಸಿ ಜೂ.26ಕ್ಕೆ (ಇಂದಿಗೆ) ವಿಚಾರಣೆ ಮುಂದೂಡಿತ್ತು.
ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿರುವ ಕೇಜ್ರಿವಾಲ್ ಅವರಿಗೆ ಕೆಳ ಹಂತದ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.