ಗೋರಾಖ್ಪುರ್: ಪುರಾಣ ಪ್ರಸಿದ್ಧ ನಗರಿ ಅಯೋಧ್ಯೆಯ ಇತಿಹಾಸದ ಸಂಪೂರ್ಣ ಅಧ್ಯಯನಕ್ಕಾಗಿ 'ಅಯೋಧ್ಯಾ ಅಧ್ಯಯನ ಕೇಂದ್ರ' ಸ್ಥಾಪಿಸಲಾಗುವುದು ಎಂದು ಉತ್ತರ ಪ್ರದೇಶದ ಗೋರಖ್ಪುರ್ದ ದೀನ್ ದಯಾಳ್ ಉಪಾಧ್ಯಾಯ್ ವಿಶ್ವವಿದ್ಯಾಲಯ (ಡಿಡಿಯು) ಘೋಷಿಸಿದೆ. ಅಯೋಧ್ಯೆಯ ಇತಿಹಾಸ ಎಂಬ ಕೋರ್ಸ್ ಅನ್ನು ಸ್ನಾತಕೋತ್ತರ ವಿಭಾಗದಲ್ಲಿ ಮುಂದಿನ ಶೈಕ್ಷಣಿಕ ವರ್ಷ 2024-25ರಿಂದ ಆರಂಭಿಸಲಾಗುವುದು ಎಂದು ವಿವಿ ತಿಳಿಸಿದೆ.
ಅಯೋಧ್ಯಾ ಅಧ್ಯಯನ ಕೇಂದ್ರವನ್ನು ವಿವಿಯ ಕಲಾ ವಿಭಾಗದಲ್ಲಿ ಸ್ಥಾಪಿಸಲಾಗಿದೆ. ವಿಶೇಷ ಕೋರ್ಸ್‌ಗಳ ಮೂಲಕ ವಿದ್ಯಾರ್ಥಿಗಳನ್ನು ಅಯೋಧ್ಯೆಯ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಇತಿಹಾಸದ ಕುರಿತು ತಿಳಿಯಲು ಪ್ರೋತ್ಸಾಹಿಸಲಾಗುತ್ತದೆ. ವಿಶ್ವವಿದ್ಯಾಲಯದ ವಿವಿಧ ವಿಭಾಗದೊಂದಿಗೆ ಅಯೋಧ್ಯೆ ಮತ್ತು ರಾಮನ ಕುರಿತು ಸಂಶೋಧನೆ ನಡೆಸಲು ಈ ಕೇಂದ್ರ ಸಮನ್ವಯ ಸಾಧಿಸುತ್ತದೆ.
ಈ ಕುರಿತು ಮಾತನಾಡಿರುವ ಗೋರಖ್ಪುರ್ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಪೂನಂ ತಂಡೊನ್, ರಾಮ ಹುಟ್ಟಿದ ಸ್ಥಳ ಅಯೋಧ್ಯಾ 134 ಕಿ.ಮೀ ದೂರದಲ್ಲಿದ್ದರೆ, ಬುದ್ದ ಪರಿನಿರ್ವಾಣ ಸ್ಥಳ ಕುಶಿನಗರ 55 ಕಿ.ಮೀ ದೂರದಲ್ಲಿದೆ. ಬುದ್ದನ ಜನ್ಮಸ್ಥಳ ಲುಂಬಿನಿ 122 ಕಿ.ಮೀ ದೂರದಲ್ಲಿದ್ದು, ಸಂತ ಕಬೀರ ಸಮಾಧಿ ಸ್ಥಳ 30 ಕಿ.ಮೀ ದೂರದಲ್ಲಿದೆ. ಇಂತಹ ಮಹಾನ್ ವ್ಯಕ್ತಿತ್ವಗಳ ಕುರಿತು ಕಲಿಕೆ ಮತ್ತು ಅವರ ಕೊಡುಗೆಗಳ ಕುರಿತು ಕಲಿಕೆಗೆ ಅಯೋಧ್ಯಾ ಅಧ್ಯಯನ ಕೇಂದ್ರವು ವಿದ್ಯಾರ್ಥಿಗಳು ಮತ್ತು ಸಂಶೋಧಕರು ವೇದಿಕೆ ಕಲ್ಪಿಸಲಿದೆ. ಇತಿಹಾಸ, ವಾಸ್ತುಶಿಲ್ಪ ಮತ್ತು ಸಂಸ್ಕೃತಿ ವಿಭಾಗದಲ್ಲಿ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗುವುದು. ಅಯೋಧ್ಯೆಯ ರೂಪಾಂತರ, ಪ್ರಾಚೀನ ನಗರ ಆಧುನಿಕ ಭಕ್ತರು ಮತ್ತು ಪ್ರವಾಸೋದ್ಯಮ ಕೇಂದ್ರವಾಗಿ ಬದಲಾದ ಕುರಿತು ತಿಳಿಯುವುದು ಇದರ ಉದ್ದೇಶ. ಇತರೆ ವಿಷಯದ ಅಭ್ಯರ್ಥಿಗಳೂ ಕೂಡ ಅಯೋಧ್ಯೆಯ ಇತಿಹಾಸ ಕೋರ್ಸ್ ಆಯ್ಕೆ ಮಾಡಿಕೊಂಡು ಕಲಿಯಬಹುದು ಎಂದು ಅವರು ಮಾಹಿತಿ ನೀಡಿದರು.(ಐಎಎನ್ಎಸ್)
ಇದನ್ನೂ ಓದಿ: ಅಯೋಧ್ಯೆ ದೇಗುಲಗಳಲ್ಲಿ ಅರ್ಪಿಸುವ ಹೂವುಗಳ ಸಂಪೂರ್ಣ ಮರುಬಳಕೆ; ಅಗರಬತ್ತಿ ತಯಾರಿಕೆ