ನವದೆಹಲಿ: ಡಿಎಂಕೆ ಸಂಸದ ಎಸ್. ಜಗತ್ರಕ್ಷಕನ್ ಮತ್ತು ಅವರ ಕುಟುಂಬಕ್ಕೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಪ್ರಕರಣದಲ್ಲಿ 908 ಕೋಟಿ ರೂ.ಗಳ ದಂಡ ವಿಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ತಿಳಿಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಆಗಸ್ಟ್ 26 ರಂದು ಹೊರಡಿಸಿದ ತೀರ್ಪು ಆದೇಶದ ನಂತರ 2020 ರ ಸೆಪ್ಟೆಂಬರ್‌ನಲ್ಲಿ ವಶಪಡಿಸಿಕೊಂಡ 89.19 ಕೋಟಿ ರೂ.ಗಳ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.
ಫೆಮಾದ ಸೆಕ್ಷನ್ 37ಎ ಅಡಿಯಲ್ಲಿ ಸಂಸದ ಮತ್ತು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿದ್ದ ವಿವಿಧ ಚರ ಮತ್ತು ಸ್ಥಿರಾಸ್ತಿಯನ್ನು ವಶಪಡಿಸಿಕೊಂಡ 89.19 ಕೋಟಿ ರೂ.ಗಳನ್ನು ಜಪ್ತಿ ಮಾಡಲು ಸೆಪ್ಟೆಂಬರ್ 11, 2020 ರಂದು ಆದೇಶಿಸಲಾಗಿತ್ತು ಎಂದು ಇಡಿ ಹೇಳಿದೆ.
"ಫೆಮಾದ ಸೆಕ್ಷನ್ 37 ಎ ಪ್ರಕಾರ ವಶಪಡಿಸಿಕೊಂಡ 89.19 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶಿಸಲಾಗಿದೆ ಮತ್ತು 26.08.2024ರ ತೀರ್ಪಿನ ಆದೇಶದ ಪ್ರಕಾರ 908 ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗಿದೆ" ಎಂದು ಇಡಿ ತಿಳಿಸಿದೆ.
ಯಾರು ಈ ಎಸ್. ಜಗತ್ರಕ್ಷಕನ್?: 76 ವರ್ಷದ ಎಸ್ ಜಗತ್ರಕ್ಷಕನ್ ಅವರು ಡಿಎಂಕೆ ಟಿಕೆಟ್‌ನಲ್ಲಿ ಅರಕ್ಕೋಣಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ ಕೇಂದ್ರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
ಸಂಸದ, ತಮಿಳುನಾಡಿನ ಉದ್ಯಮಿ, ಅವರ ಕುಟುಂಬಸ್ಥರ ಮತ್ತು ಸಂಬಂಧಿತ ಭಾರತೀಯ ಘಟಕದ ವಿರುದ್ಧ ಫೆಮಾ ಉಲ್ಲಂಘನೆ ಪ್ರಕರಣದಡಿ ತನಿಖೆ ಪ್ರಾರಂಭಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.