Cyber Crime News Latest : ಸೈಬರ್ ಅಪರಾಧಿಗಳು ಹೊಸ ರೀತಿಯ ವಂಚನೆಗೆ ಮುಂದಾಗುತ್ತಿದ್ದಾರೆ. ತಮ್ಮನ್ನು ತಾವು ಸಿಬಿಐ, ಎನ್‌ಐಎ, ಇಡಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಳ್ಳುತ್ತಿದ್ದಾರೆ. ಇವರು ನಿಮ್ಮ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಇದೇನಾ?.. ನಿಮ್ಮ ಖಾತೆಗಳಿಂದ ಅಕ್ರಮವಾಗಿ ಲಕ್ಷಾಂತರ ರೂಪಾಯಿ ವಹಿವಾಟು ನಡೆದಿದೆ. ನಿಮ್ಮ ಹೆಸರಿನಲ್ಲಿ ಬಂದ ಪಾರ್ಸಲ್ನಲ್ಲಿ ಡ್ರಗ್ಸ್ ಇದೆ. ಈಗಿಂದೀಗಲೇ ನಿಮ್ಮನ್ನು ಗೃಹಬಂಧನ ಮಾಡುತ್ತೇವೆ ಎಂದು ಅಮಾಯಕರಿಂದ ಹಣ ದೋಚುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಜಿ ಸೈಬರ್ ಕ್ರೈಂ ಬ್ಯೂರೋ ಪೊಲೀಸರು ಇಂತಹ ಕರೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಜನರಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಸಾಮಾನ್ಯರಿಂದ ಹಿಡಿದು ಶ್ರೀಮಂತರವರೆಗೆ ದಿಢೀರ್ ಬೆದರಿಕೆ ಫೋನ್ ಕರೆಗಳು ಭಯಭೀತಗೊಳಿಸುತ್ತವೆ. ಸತ್ಯಾಸತ್ಯೆತೆಗಳನ್ನು ಅರಿತುಕೊಳ್ಳುವಷ್ಟರಲ್ಲೇ ನಿಮ್ಮ ಖಾತೆಯಿಂದ ಹಣ ಲೂಟಿ ಮಾಡುತ್ತಾರೆ. ಜನ ಎಚ್ಚೆತ್ತುಕೊಂಡರೂ ಹೊಸ ಬಗೆಯ ವಂಚನೆಗಳಿಂದ ಮೋಸ ಹೋಗುತ್ತಿದ್ದಾರೆ. ಈ ವರ್ಷ ಫೆಡ್‌ಎಕ್ಸ್ ಕೊರಿಯರ್ ಕಂಪನಿಯ ಹೆಸರನ್ನು ಬಳಸಿಕೊಂಡು ವಿದೇಶದಿಂದ ಡ್ರಗ್ಸ್, ಕಪ್ಪುಹಣ, ಶಸ್ತ್ರಾಸ್ತ್ರಗಳು ನಿಮ್ಮ ಹೆಸರಿನಲ್ಲಿ ಬಂದಿವೆ ಎಂದು ಬೆದರಿಸಿ ಅಮಾಯಕರಿಂದ ಅಪಾರ ಪ್ರಮಾಣದ ಹಣವನ್ನು ವಸೂಲಿ ಮಾಡಲಾಗುತ್ತಿದೆ. ಇಂತಹ ವಂಚಕರ ಮಾತಿಗೆ ಬೆದರಬೇಡಿ ಎಂದು ಸೈಬರ್ ಕ್ರೈಂ ಬ್ಯೂರೋ ಪೊಲೀಸರು ಸೂಚಿಸಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಎಂದು ಹೇಳಿಕೊಂಡು ನಿಮ್ಮನ್ನು ಮೊದಲಿಗೆ ನಂಬಿಸುತ್ತಾರೆ. ಬಳಿಕ ಆಧಾರ್, ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರ ಪಡೆಯುತ್ತಾರೆ. ಒಟ್ಟಿನಲ್ಲಿ ಅವರು ಅಧಿಕಾರಿಗಳೆಂದು ನಂಬಿಸುತ್ತಾರೆ.
ಅವರ ಮಾತಿಗೆ ಮತ್ತು ಅವರು ತೊಟ್ಟ ಉಡುಪುಗಳನ್ನು ಕಂಡು ಸಂತ್ರಸ್ತರು ಸುಲಭವಾಗಿ ಅವರ ಬುಟ್ಟಿಗೆ ಬೀಳುತ್ತಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಮನೆಯಿಂದ ಕದಲಬಾರದು ಎಂದು ಹೇಳುವ ಮೂಲಕ ‘ಡಿಜಿಟಲ್ ಬಂಧನ’ ಮಾಡಿದಂತೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ವರ್ಷದ 177 ದಿನಗಳಲ್ಲಿ ರಾಜ್ಯಾದ್ಯಂತ 592 ಮಂದಿಯಿಂದ ಸುಮಾರು 44 ಕೋಟಿ ರೂ. ದೋಚಿಕೊಂಡಿದ್ದಾರೆ ಎಂದು ಸೈಬರ್ ಸೆಕ್ಯುರಿಟಿ ಬ್ಯೂರೊ ಡಿಎಸ್‌ಪಿ ಕೆವಿಎಂ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಸೈಬರ್ ವಂಚಕರ ಕರೆಗಳನ್ನು ಸ್ವೀಕರಿಸಿದಾಗ ಮಾಡಬೇಕಾಗಿದ್ದು ಇಷ್ಟೆ..
- ಅಪರಿಚಿತ ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಕರೆಗಳಿಗೆ ಉತ್ತರಿಸಬೇಡಿ.
- ಟೆಲಿಕಾಲರ್‌ಗಳು ನಿಮಗೆ ಹೇಳುತ್ತಿರುವ ಎಲ್ಲಾ ವಿವರಗಳು ಸರಿಯಾಗಿವೆ ಎಂದು ನೀವು ಭಾವಿಸಿದರೂ ಸಹ ಭಯಪಡಬೇಡಿ.
- ವಿಡಿಯೋ ಕರೆಯ ಇನ್ನೊಂದು ಬದಿಯಲ್ಲಿ ಕಂಡುಬರುವ ಕೇಂದ್ರ ತನಿಖಾ ಸಂಸ್ಥೆಗಳ ಎಲ್ಲಾ ಲೋಗೋಗಳು ನಕಲಿಗಳು ಆಗಿರುತ್ತವೆ. ಇದನ್ನು ನೋಡಿ ಸತ್ಯವೆಂದು ತಿಳಿಯಬೇಡಿ.
- ಮುಖ ತೋರಿಸದೆ ಮಾತನಾಡುವವರು ಮೋಸಗಾರರು ಎಂಬುದನ್ನು ಅರಿತುಕೊಳ್ಳಬೇಕು.
- ಅಪರಿಚಿತ ವ್ಯಕ್ತಿಗಳಿಂದ ಬರುವ ಫೋನ್ ಕರೆಗಳು, ಸಂದೇಶಗಳು ಮತ್ತು ಲಿಂಕ್‌ಗಳನ್ನು ನಿರ್ಲಕ್ಷಿಸಿ.
- ನೀವು ಮೋಸ ಹೋಗಿರುವುದು ಗೊತ್ತಾದಾಗ ಒಂದು ಗಂಟೆಯೊಳಗೆ (ಗೋಲ್ಡನ್ ಅವರ್) ಪೊಲೀಸರಿಗೆ ದೂರು ನೀಡಿ.
- ಪೊಲೀಸರು ಆರೋಪಿಗಳ ಖಾತೆ ಸೀಜ್ ಮಾಡುವ ಮೂಲಕ ನಿಮ್ಮ ಹಣ ವಾಪಸ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.