ಫತೇಪುರ (ಉತ್ತರಪ್ರದೇಶ): ಪತಿ-ಪತ್ನಿಯರ ನಡುವಿನ ಜಗಳ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಆದ್ರೆ ಇದೊಂದು ವಿಶಿಷ್ಟ ಪ್ರಕರಣ. ಏಕೆಂದ್ರೆ ಮದುವೆಯ ಬಳಿಕ ಪತಿ ಯಾವಾಗಲೂ ಹೆಂಡತಿಯಿಂದ ದೂರವಿರುತ್ತಿದ್ದ. ಈ ಬಗ್ಗೆ ಪತ್ನಿ ತನ್ನ ತವರು ಮನೆಗೆ ಮಾಹಿತಿ ಮುಟ್ಟಿಸಿದ್ದಾಳೆ. ಮಹಿಳೆ ಕುಟುಂಬಸ್ಥರು ಈ ವಿಷಯದ ಬಗ್ಗೆ ಅಳಿಯನ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದಾರೆ. ಆಗ ಶೀಘ್ರದಲ್ಲೇ ಎಲ್ಲವೂ ಸರಿಹೋಗುತ್ತದೆ ಎಂದು ಹೆಣ್ಣಿನ ಕುಟುಂಬಸ್ಥರಿಗೆ ಗಂಡಿನ ಕುಟುಂಬಸ್ಥರು ಭರವಸೆ ನೀಡಿದ್ದರು.
ಆದರೆ ದಿನ ಕಳೆದಂತೆ ಗಂಡನ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ. ಇದರಿಂದ ಪತ್ನಿಗೆ ಮತ್ತಷ್ಟು ಬೇಸರವಾಯಿತು. ಹೆಂಡತಿಯ ಸ್ಥಿತಿಗೆ ಕರುಣೆ ತೋರಿದ ಪತಿ ನಾನು ಸಲಿಂಗಕಾಮಿ ಎಂದು ಅವಳಿಗೆ ಸಂಪೂರ್ಣ ಸತ್ಯವನ್ನು ಹೇಳಿದ್ದಾನೆ. ನನಗೆ ಮಹಿಳೆಯರ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ನಾನು ಹುಡುಗರನ್ನು ಇಷ್ಟಪಡುತ್ತೇನೆ ಎಂದು ಗಂಡ ಹೇಳಿದಾಗ ಪತ್ನಿ ಬೆಚ್ಚಿಬಿದ್ದಿದ್ದಾಳೆ. ಕೂಡಲೇ ಈ ವಿಷಯವನ್ನು ಮಹಿಳೆ ತನ್ನ ಅತ್ತೆಗೆ ತಿಳಿಸಿದಾಗ ಆಕೆಯನ್ನು ಹೊಡೆದು ಮನೆಯಿಂದ ಹೊರಹಾಕಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ಹೇಳಿದ್ದೇನು?: ಪೊಲೀಸ್ ಠಾಣೆ ಪ್ರಭಾರಿ ಇನ್ಸ್‌ಪೆಕ್ಟರ್ ಶಂಶೇರ್ ಬಹದ್ದೂರ್ ಸಿಂಗ್ ಮಾತನಾಡಿ, ಈ ವಿಷಯವು ಜಿಲ್ಲೆಯ ಖಗಾ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆಯೊಬ್ಬರು 29 ಮೇ, 2021 ರಂದು ಆ ಪ್ರದೇಶದ ಯುವಕನನ್ನು ಮದುವೆಯಾಗಿದ್ದರು. ಮದುವೆಯಲ್ಲಿ ಆಕೆಯ ತಂದೆ ವರದಕ್ಷಿಣೆ ನೀಡಿದ್ದರು. ನಗದು ಸೇರಿ ಮದುವೆಗೆ ಒಟ್ಟು 34 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಮದುವೆಯ ನಂತರ ಅತ್ತೆಯ ಮನೆಗೆ ಬಂದ ಆಕೆಗೆ ಗಂಡನ ವರ್ತನೆ ಇಷ್ಟವಾಗಿರಲಿಲ್ಲ. ಗೃಹಿಣಿಯೊಂದಿಗೆ ಅತ್ತೆ-ಮಾವಂದಿರೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಪತಿ ನಾನಾ ನೆಪಗಳನ್ನು ಹೇಳುತ್ತ ಆಕೆಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದ. ಇದು ಬಹಳ ದಿನ ಮುಂದುವರಿದಾಗ ವಿವಾಹಿತ ಮಹಿಳೆ ತನ್ನ ತವರು ಮನೆಗೆ ಹಿಂದುರುಗಿದಳು. ಪತಿ ಮತ್ತು ಅತ್ತೆಯ ವರ್ತನೆಯ ಬಗ್ಗೆ ಪೋಷಕರಿಗೆ ತಿಳಿಸಿದಳು. ಆಗ ಮಹಿಳೆಯ ತಂದೆ ಮತ್ತು ತಾಯಿ ಅಳಿಯನ ಕುಟುಂಬಸ್ಥರೊಂದಿಗೆ ಮಾತನಾಡಿ ವಿಷಯ ತಿಳಿಸಿದ್ದರು. ಈ ಬಗ್ಗೆ ಗಂಡನ ಕುಟುಂಬಸ್ಥರು ಶೀಘ್ರದಲ್ಲೇ ಎಲ್ಲವೂ ಸರಿಹೋಗುತ್ತದೆ ಎಂದು ಭರವಸೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸತ್ಯ ಹೇಳಿದ ಗಂಡ: ಇದಾದ ಬಳಿಕ ವಿವಾಹಿತ ಮಹಿಳೆ ಪೋಷಕರ ಮನೆಯಿಂದ ಅತ್ತೆಯ ಮನೆಗೆ ಹೋದರು. ದಾರಿಯಲ್ಲಿ ಅತ್ತೆ, ಮಾವ ಮತ್ತು ಸೋದರ ಮಾವ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಗಂಡನ ಮನೆಗೆ ಬಂದ ನಂತರ ವಿವಾಹಿತ ಮಹಿಳೆ ನಡೆದ ವಿಷಯದ ಬಗ್ಗೆ ಪತಿಗೆ ತಿಳಿಸಿದ್ದಳು. ಈ ವೇಳೆ ಪತಿಯು ತನ್ನ ಪತ್ನಿಯ ಸ್ಥಿತಿ ಕಂಡು ನೊಂದುಕೊಂಡರು. ಕುಟುಂಬಸ್ಥರ ಒತ್ತಡದಿಂದ ನನಗೆ ಈ ಮದುವೆ ನಡೆದಿದೆ ಎಂದು ಪತ್ನಿಯ ಎದುರು ಗಂಡ ಅಳಲು ತೋಡಿಕೊಂಡರು.
ನನಗೆ ವಿಚ್ಛೇದನ ಕೊಡು, ನಾನು ಸಲಿಂಗಕಾಮಿ. ನಾನು ಹುಡುಗರನ್ನು ಇಷ್ಟಪಡುತ್ತೇನೆ. ನಾನು ಹುಡುಗಿಯರನ್ನು ಇಷ್ಟಪಡುವುದಿಲ್ಲ ಎಂದು ಗಂಡ ಹೇಳಿದಾಗ ಪತ್ನಿ ದಿಗ್ಭ್ರಮೆಗೊಂಡರು. ಈ ಬಗ್ಗೆ ತನ್ನ ಅತ್ತೆಗೆ ತಿಳಿಸಿದಾಗ ತನ್ನ ಮೇಲೆ ಬೆಲ್ಟ್‌ನಿಂದ ಹೊಡೆದು ದೌರ್ಜನ್ಯ ನಡೆಸಿದ್ದಾರೆ ಎಂದು ವಿವಾಹಿತ ಮಹಿಳೆ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 1, 2022 ರಂದು ವಿವಾಹಿತ ಮಹಿಳೆ ತನ್ನ ಸಹೋದರನನ್ನು ಕರೆದು ಆತನೊಂದಿಗೆ ತನ್ನ ತಾಯಿಯ ಮನೆಗೆ ಬಂದಳು. ಇದೀಗ ವಂಚನೆ ಹಾಗೂ ಒತ್ತಡದಲ್ಲಿ ನಡೆದ ಮದುವೆ ವಿರುದ್ಧ ವಿವಾಹಿತೆ ಧ್ವನಿ ಎತ್ತಿದ್ದಾರೆ. ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆ ಸೇರಿದಂತೆ ಪತಿ, ಅತ್ತೆ, ಮಾವ, ಸೋದರಮಾವ ಸೇರಿದಂತೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ಓದಿ: ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮನೆ, ಕಚೇರಿ ಮೇಲೆ ಇಡಿ ದಾಳಿ: 41 ಗಂಟೆಗಳವರೆಗೆ ಶೋಧ ಕಾರ್ಯ