ನವದೆಹಲಿ: ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ದ ಹೊರಡಿಸಿದ್ದ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ರಾಮ್ದೇವ್ ಅವರ ಸಹಮಾಲೀಕತ್ವದ ಪತಂಜಲಿ ಆಯುರ್ವೇದ ಸಂಸ್ಥೆ ಮತ್ತು ನಿರ್ದೇಶಕ ಆಚಾರ್ಯ ಬಾಲಕೃಷ್ಣ ವಿರುದ್ದ ಸುಪ್ರೀಂ ಕೋರ್ಟ್ ಮಂಗಳವಾರ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದೆ.
ಅಲೋಪತಿ ಚಿಕಿತ್ಸಾ ಪದ್ಧತಿಯ ವಿರುದ್ಧ ಪತಂಜಲಿ ಆಯುರ್ವೇದ ಸಂಸ್ಥೆ ತಪ್ಪು ಮಾಹಿತಿ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಸ್ಥೆ (IMA) ಸುಪ್ರೀಂ ಕೋರ್ಟ್ಗೆ ಕಳೆದ ವರ್ಷ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ತನ್ನ ಮುಂದಿನ ಆದೇಶದವರೆಗೆ ಔಷಧಿ ಉತ್ಪನ್ನಗಳ ಕುರಿತು ಯಾವುದೇ ಜಾಹೀರಾತು ನೀಡದಂತೆ ನಿರ್ಬಂಧಿಸಿತ್ತು.
ಆದಾಗ್ಯೂ, ಆದೇಶವನ್ನು ಪತಂಜಲಿ ಸಂಸ್ಥೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇಂದು ನ್ಯಾ.ಹಿಮಾ ಕೊಹ್ಲಿ ಮತ್ತು ನ್ಯಾ.ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ದ್ವಿಸದಸ್ಯ ಪೀಠ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಮುಂದಿನ ಆದೇಶದವರೆಗೆ ಔಷಧಿ ಉತ್ಪನ್ನಗಳ ಕುರಿತು ಎಲ್ಲಾ ವಿದ್ಯುನ್ಮಾನ ಮತ್ತು ಮುದ್ರಣದಲ್ಲಿ ಜಾಹೀರಾತು ನೀಡದಂತೆ ನಿರ್ಬಂಧಿಸಿದೆ.
ಹಿಂದಿನ ಆದೇಶವನ್ನು ಉಲ್ಲೇಖಿಸಿದ ಪೀಠ, ನ್ಯಾಯಾಲಯದ ಆದೇಶದ ಹೊರತಾಗಿಯೂ ತಮ್ಮ ಸಂಸ್ಥೆಯ ಔಷಧಿಗಳು ವಿವಿಧ ಕಾಯಿಲೆಗಳನ್ನು ಸಂಪೂರ್ಣವಾಗಿ ಗುಣಪಡಿಸುತ್ತವೆ ಎಂದು ಹೇಗೆ ಹೇಳುತ್ತದೆ ಎಂದು ಪ್ರಶ್ನಿಸಿತು. ಜನರ ದೃಷ್ಟಿಯಲ್ಲಿ ಅಲೋಪತಿ ವೈದ್ಯ ಪದ್ಧತಿಯನ್ನು ಕೀಳಾಗಿ ಕಾಣಲು ಸಾಧ್ಯವಿಲ್ಲ ಮತ್ತು ಅಲೋಪತಿಯಂತಹ ಯಾವುದೇ ಚಿಕಿತ್ಸಾ ವ್ಯವಸ್ಥೆಯನ್ನು ಟೀಕಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಅಲ್ಲದೇ ಮೂರು ವಾರಗಳೊಳಗೆ ಇದಕ್ಕೆ ಉತ್ತರಿಸುವಂತೆಯೂ ಪತಂಜಲಿ ಸಂಸ್ಥೆಗೆ ಸೂಚಿಸಿದೆ.
ವಿವಿಧ ಕಾಯಿಲೆಗಳನ್ನು ಗುಣಪಡಿಸುವ ಕುರಿತು ಪತಂಜಲಿಯ "ದಾರಿ ತಪ್ಪಿಸುವ ಮತ್ತು ಸುಳ್ಳು ಜಾಹೀರಾತುಗಳ" ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಕಣ್ಣುಮುಚ್ಚಿ ಕುಳಿತಿದೆ ಎಂದು ಚಾಟಿ ಬೀಸಿದ ನ್ಯಾಯಾಲಯವು, ಸಂಸ್ಥೆಯ ಜಾಹೀರಾತುಗಳ ಮೇಲೆ ನಿಗಾ ಇಡುವಂತೆ ಸೂಚಿಸಿದೆ.