ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯ ಸೋಲಿನ ಬಗ್ಗೆ ತನಿಖೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಚುನಾವಣೋತ್ತರ ಸಮೀಕ್ಷೆ ಮತ್ತು ಪಕ್ಷದ ಪ್ರಕಾರ ಪಕ್ಷಕ್ಕೆ ಅಧಿಕಾರ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಹೀನಾಯ ಸೋಲು ಪಕ್ಷಕ್ಕೆ ಭಾರಿ ಹಿನ್ನಡೆ ಉಂಟು ಮಾಡಿದೆ. ಮತಯಂತ್ರಗಳು ಟ್ಯಾಂಪರಿಂಗ್ ಆಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪಕ್ಷ ಈ ಬಗ್ಗೆ ತನಿಖೆ ನಡೆಸಿ ಚುನಾವಣಾ ಆಯೋಗಕ್ಕೆ ದೂರು ನೀಡಲು ತೀರ್ಮಾನಿಸಿದೆ.
ಚುನಾವಣಾ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಶೀಘ್ರದಲ್ಲೇ ಸಮಿತಿ ರಚಿಸಲಿದ್ದಾರೆ. ಹನ್ನೆರಡು ವಿಧಾನಸಭಾ ಕ್ಷೇತ್ರಗಳಲ್ಲಿ ಇವಿಎಂ ಟ್ಯಾಂಪರಿಂಗ್ ನಡೆದಿದೆ. ಫಲಿತಾಂಶವನ್ನು ಪರಿಶೀಲನೆಗೆ ಒಳಪಡಿಸಿ, ದಾಖಲೆ ಸಮೇತ ಚುನಾವಣೆ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಚೌಹಾಣ್ ತಿಳಿಸಿದರು.
ಚುನಾವಣಾ ಫಲಿತಾಂಶ ಅಚ್ಚರಿ ತಂದಿದೆ. ಫಲಿತಾಂಶ ಸಮೀಕ್ಷೆಗಳು ಮತ್ತು ಜನರ ಮನಸ್ಥಿತಿಗೆ ವಿರುದ್ಧವಾಗಿದೆ. ಸೋತ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಕ್ರಮ ನಡೆದಿದೆ ಎಂಬ ಮಾಹಿತಿ ಇದೆ ಎಂದರು.
ಜಮ್ಮು- ಕಾಶ್ಮೀರದಲ್ಲೂ ಬಿಜೆಪಿಯನ್ನು ದೊಡ್ಡ ಮಟ್ಟದಲ್ಲಿ ಸೋಲಿಸಲು ಸಾಧ್ಯವಾಗಿಲ್ಲ ಎಂಬುದು ನಿಜ. ಖಂಡಿತವಾಗಿಯೂ ಇಂತಹ ಫಲಿತಾಂಶವನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೂ ಕಣಿವೆನಾಡಿನಲ್ಲಿ ನಮ್ಮ ಮೈತ್ರಿಯು ಬಹುಮತ ಪಡೆದಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವುದು ನಮ್ಮ ಗುರಿ ಎಂದು ಜಮ್ಮು ಮತ್ತು ಕಾಶ್ಮೀರದ ಎಐಸಿಸಿ ಕಾರ್ಯದರ್ಶಿ ಮನೋಜ್ ಯಾದವ್ ತಿಳಿಸಿದರು.
ಇದನ್ನೂ ಓದಿ: ಕೇಂದ್ರದ ಒತ್ತಡದಿಂದ ಫಲಿತಾಂಶ ವಿಳಂಬ- ಕಾಂಗ್ರೆಸ್ ಆರೋಪ: ಚುನಾವಣಾ ಆಯೋಗದ ಸ್ಪಷ್ಟನೆ ಇದು