ನವದೆಹಲಿ: ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ತನ್ನ ಬಾಕಿ ಇರುವ ಸೀಟುಗಳನ್ನು ಈ ವಾರ ಪ್ರಕಟಿಸುವ ಸಾಧ್ಯತೆಯಿದೆ. ಮಾರ್ಚ್ 21 ರಂದು ಮಹಾರಾಷ್ಟ್ರ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಬಾಕಿ ಇರುವ ಕ್ಷೇತ್ರಗಳಗೆ ಸೀಟು ಹಂಚಿಕೆ ನಡೆಯಲಿದೆ ಎಂದು ತಿಳಿದುಬಂದಿದೆ.
ಮಾರ್ಚ್ 21 ರಂದು ಶರದ್ ಪವಾರ್, ಉದ್ಧವ್ ಠಾಕ್ರೆ, ನಾನಾ ಪಟೋಲೆ, ಬಾಳಾಸಾಹೇಬ್ ಥೋರಟ್ ಸೇರಿದಂತೆ ಮೈತ್ರಿ ಪಕ್ಷಗಳ ಹಿರಿಯ ನಾಯಕರು ಸಭೆ ನಡೆಸಲಿದ್ದಾರೆ. ಕೆಲವು ಸ್ಥಾನಗಳನ್ನು ಹೊರತುಪಡಿಸಿ ಟಿಕೆಟ್ ಹಂಚಿಕೆ ಬಹುತೇಕ ಪೂರ್ಣಗೊಂಡಿದೆ ಎಂದು ಮಹಾರಾಷ್ಟ್ರದ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಆಶಿಶ್ ದುವಾ ಈಟಿವಿ ಭಾರತ್ಗೆ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಶಿವಸೇನೆಯ ಉದ್ಧವ್ ಠಾಕ್ರೆ ಬಣ 20, ಕಾಂಗ್ರೆಸ್ 18 ಮತ್ತು ಎನ್ಸಿಪಿ ಶರದ್ ಪವಾರ್ ಅವರ ಬಣಕ್ಕೆ 10 ಸ್ಥಾನ ಸಿಗುವ ಸಾಧ್ಯತೆಯಿದೆ. ಇನ್ನು ಪ್ರಕಾಶ್ ಅಂಬೇಡ್ಕರ್ ಅವರ ’ವಂಚಿತ್ ಬಹುಜನ್ ಅಘಾಡಿ‘ ಮೈತ್ರಿಕೂಟದಲ್ಲಿ ಸೇರುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ.
ಸಾಂಗ್ಲಿ, ಕೊಲ್ಹಾಪುರ, ಲಾತೂರ್, ನಾಗ್ಪುರ, ಮುಂಬೈ ನಾರ್ತ್ ಸೆಂಟ್ರಲ್, ಮುಂಬೈ ಸೌತ್ ಸೆಂಟ್ರಲ್, ಗಡ್ಚಿರೋಲಿ, ರಾಮ್‌ಟೆಕ್, ಚಂದ್ರಾಪುರ, ಅಮರಾವತಿ, ಸೊಲ್ಲಾಪುರ, ಭಿವಂಡಿ, ಪುಣೆ, ನಾಂದೇಡ್, ಧುಲೆ, ನಂದೂರ್‌ಬಾರ್, ಅಕೋಲಾ ಮತ್ತು ಭಂಡಾರ ಗೊಂಡಿಯಾ ಕಾಂಗ್ರೆಸ್‌ಗೆ ಸಿಗುವ ಸಾಧ್ಯತೆಗಳಿವೆ. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಕಾಂಗ್ರೆಸ್‌ಗೆ ಸಾಂಗ್ಲಿ ಸ್ಥಾನ ಸಿಗಲಿದೆ ಎಂದು ಈಗಾಗಲೇ ಹೇಳಿಕೊಂಡಿದ್ದಾರೆ. ಆದರೆ, ಇದು ಇನ್ನು ಖಚಿತವಾಗಿಲ್ಲ. ಅಲ್ಲದೇ, ಕಾಂಗ್ರೆಸ್ ಮುಂಬೈ ಸೌತ್ ಸೆಂಟ್ರಲ್ ಸ್ಥಾನ ಪಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ 23, ಕಾಂಗ್ರೆಸ್ 1, ಎನ್ಸಿಪಿ 4 ಮತ್ತು ಶಿವಸೇನೆ 18 ಸ್ಥಾನಗಳನ್ನು ಗೆದ್ದಿತ್ತು.
ಬಿಹಾರದಲ್ಲಿ ಕಾಂಗ್ರೆಸ್ ಕನಿಷ್ಠ 9 ಕ್ಷೇತ್ರಗಳಲ್ಲಿ ಸ್ಫರ್ಧೆ: ಮತ್ತೊಂದೆಡೆ, 40 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಬಿಹಾರದಲ್ಲಿ, ಕಾಂಗ್ರೆಸ್ ಕನಿಷ್ಠ 9 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಹೆಚ್ಚಿನ ಸ್ಥಾನಗಳು ಆರ್ಜೆಡಿಗೆ ಮತ್ತು ಉಳಿದವು ಎಡ ಪಕ್ಷಗಳಿಗೆ ಸಿಗಲಿವೆ. ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿವೆ. ಸೌಹಾರ್ದಯುತವಾಗಿ ಮಾತುಕತೆಗಳು ನಡೆಯುತ್ತಿವೆ ಎಂದು ಬಿಹಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶಕೀಲ್ ಅಹ್ಮದ್ ಖಾನ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಮಾರ್ಚ್ 17 ರಂದು ಮುಂಬೈನಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ರ‍್ಯಾಲಿಯಲ್ಲಿ ಭಾಗವಹಿಸಿದಾಗ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಕಾಂಗ್ರೆಸ್ ಹಿರಿಯ ನಾಯಕರು ಸೀಟು ಹಂಚಿಕೆ ಸೂತ್ರ ರೂಪಿಸಿದ್ದಾರೆ. ಈ ಹಿಂದೆ, ಜನ ಅಧಿಕಾರ್ ಪಕ್ಷದ ಮುಖಂಡ ಮತ್ತು ಮಾಜಿ ಲೋಕಸಭಾ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರು ಪೂರ್ಣಿಯಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ನಿಂದ ಸ್ಪರ್ಧಿಸುವ ಯೋಜನೆ ಇತ್ತು. ಆದರೆ ಈಗ ಆರ್ಜೆಡಿ ಕೂಡ ಅವರನ್ನು ತಮ್ಮ ಪಕ್ಷದಿಂದ ಕಣಕ್ಕಿಸಲು ಬಯಸಿದೆ ಎಂದು ತಿಳಿಸಿವೆ.
ಪಪ್ಪು ಯಾದವ್ ಅವರು ಮಾರ್ಚ್ 19 ರಂದು ಪಾಟ್ನಾದಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿ, ವಿಪಕ್ಷಗಳ ಮೈತ್ರಿಕೂಟಕ್ಕೆ ಸೇರುವ ಬಗ್ಗೆ ಚರ್ಚಿಸಿದ್ದರು. ಇನ್ನು ಕಾಂಗ್ರೆಸ್ ಸಿಡಬ್ಲ್ಯೂಸಿ ಸದಸ್ಯ ತಾರಿಕ್ ಅನ್ವರ್ ಅವರು ಕಟಿಹಾರ್ ನಿಂದ ಸ್ಪರ್ಧಿಸಬಹುದು, ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರ ಪುತ್ರ ಅನ್ಶುಲ್ ಕುಮಾರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ನಿಖಿಲ್ ಕುಮಾರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. 2019 ರಲ್ಲಿ ಬಿಹಾರದಲ್ಲಿ ಕಾಂಗ್ರೆಸ್ ಕೇವಲ 1 ಸ್ಥಾನವನ್ನು ಗೆದ್ದರೆ, ಎನ್ಡಿಎ 39 ಸ್ಥಾನಗಳನ್ನು ಗೆದ್ದಿತ್ತು.
14 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್‌ನಲ್ಲಿ ಕಾಂಗ್ರೆಸ್ 9 ಕ್ಷೇತ್ರಗಳನ್ನು ಪಡೆಯುವ ಸಾಧ್ಯತೆಯಿದೆ. ಜಾರ್ಖಂಡ್‌ನ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್ ಅವರು ಇತ್ತೀಚೆಗೆ ಜೆಎಂಎಂ ನಾಯಕ ಮತ್ತು ಮುಖ್ಯಮಂತ್ರಿ ಚಂಪೈ ಸೊರೆನ್ ಅವರೊಂದಿಗೆ ಸೀಟು ಹಂಚಿಕೆ ಬಗ್ಗೆ ಚರ್ಚಿಸಿದ್ದರು. 2019 ರಲ್ಲಿ ಕಾಂಗ್ರೆಸ್ ಮತ್ತು ಜೆಎಂಎಂ ತಲಾ 1 ಸ್ಥಾನ ಗೆದ್ದಿದ್ದರೆ, ಬಿಜೆಪಿ 11 ಸ್ಥಾನ ಮತ್ತು ಎಜೆಎಸ್‌ಯು 1 ಸ್ಥಾನ ಗಳಿಸಿತ್ತು.
ಇದನ್ನೂ ಓದಿ: 'ರಾಜಕೀಯ ಸ್ಟಾರ್ಟ್ಅಪ್ನಲ್ಲಿ ಪ್ರತಿ ಬಾರಿ ಫೇಲ್': ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ