ಭುವನೇಶ್ವರ (ಒಡಿಶಾ): ಚುನಾವಣಾ ಪ್ರಚಾರಕ್ಕೆ ಹಣದ ಕೊರತೆ ಹಿನ್ನೆಲೆ ಒಡಿಶಾ ಕಾಂಗ್ರೆಸ್ನ ಪುರಿ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಸುಚರಿತಾ ಮೊಹಾಂತಿ ಚುನಾವಣಾ ಕಣದಿಂದ ಹಿಂದೆ ಸರಿದು, ಪಕ್ಷ ನೀಡಿದ ಟಿಕೆಟ್ ಅನ್ನು ವಾಪಸ್ ನೀಡಿದ್ದಾರೆ.
ಈ ಬಗ್ಗೆ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಿರುವ ಅವರು, ಚುನಾವಣೆಯಲ್ಲಿ ಸ್ಪರ್ಧಿಸಲು ಬೇಕಾದ ಹಣ ನನ್ನ ಬಳಿ ಇಲ್ಲ. ಪಕ್ಷವೂ ಹಣಕಾಸಿನ ನೆರವು ನೀಡಲಾಗಲ್ಲ ಎಂದಿದೆ. ಹೀಗಾಗಿ ಚುನಾವಣೆಯಿಂದ ಹಿಂದೆ ಸರಿದು ಸಾಮಾನ್ಯ ಕಾರ್ಯಕರ್ತೆಯಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.
ಪಕ್ಷವು ಹಣದ ನೆರವು ನಿರಾಕರಿಸಿದ್ದರಿಂದಾಗಿ ಪುರಿ ಲೋಕಸಭಾ ಕ್ಷೇತ್ರದಲ್ಲಿ ತನ್ನ ಪ್ರಚಾರಕ್ಕೆ ಭಾರೀ ಹೊಡೆತ ಬಿದ್ದಿದೆ. ಪಕ್ಷವು ನನಗೆ ಹಣ ನೀಡಲು ಸಾಧ್ಯವಾಗದ ಕಾರಣ ಟಿಕೆಟ್ ವಾಪಸ್ ನೀಡುತ್ತಿದ್ದೇನೆ. ಜೊತೆಗೆ ವಿಧಾನಸಭೆ ಚುನಾವಣೆಯಲ್ಲಿ ತನ್ನ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಭ್ಯರ್ಥಿಗಳು ಸ್ವತಃ ಖರ್ಚಿನಿಂದಲೇ ಚುನಾವಣೆ ಎದುರಿಸಬೇಕು ಎಂದು ಎಐಸಿಸಿ ಒಡಿಶಾ ಉಸ್ತುವಾರಿ ಅಜಯ್ ಕುಮಾರ್ ಅವರು ಸೂಚಿಸಿದ್ದಾರೆ. ನಾನು ಪತ್ರಕರ್ತೆಯಾಗಿದ್ದು, 10 ವರ್ಷಗಳ ಹಿಂದಷ್ಟೇ ರಾಜಕೀಯಕ್ಕೆ ಬಂದಿದ್ದೇನೆ. ಚುನಾವಣಾ ಪ್ರಚಾರಕ್ಕೆ ನನ್ನ ಬಳಿ ಇರುವ ಹಣವನ್ನು ವಿನಿಯೋಗಿಸಿದ್ದೇನೆ. ಪ್ರಗತಿಪರ ರಾಜಕೀಯಕ್ಕಾಗಿ ದೇಣಿಗೆ ಸಂಗ್ರಹಿಸಿದರೂ, ಯೋಜಿತ ರೀತಿಯಲ್ಲಿ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ಟೀಕೆ: ಹಣದ ಕೊರತೆಯಿಂದಾಗಿ ಜನಮುಖಿ ಪ್ರಚಾರ ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಪಕ್ಷದ ಬ್ಯಾಂಕ್ ಖಾತೆಗಳ ಮೇಲೆ ನಿರ್ಬಂಧ ವಿಧಿಸಿದ್ದರಿಂದ ಪಕ್ಷವೂ ಹಣಕಾಸಿನ ಸಮಸ್ಯೆ ಎದುರಿಸುತ್ತಿದೆ. ಇದರಿಂದ ಖರ್ಚಿನ ಮೇಲೆ ತೀವ್ರ ಪರಿಣಾಮ ಬಿದ್ದಿದೆ ಎಂದು ಮೊಹಾಂತಿ ಅವರು ಹೇಳಿದ್ದಾರೆ.
ಮೊಹಾಂತಿ ಅವರ ಆರೋಪಗಳನ್ನು ಟೀಕಿಸಿರುವ ಒಡಿಶಾದ ಎಐಸಿಸಿ ಉಸ್ತುವಾರಿ ಅಜೋಯ್‌ಕುಮಾರ್, ಚುನಾವಣಾ ಪ್ರಚಾರಕ್ಕಾಗಿ ಹಣ ನೀಡಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ ಎಂಬ ಆರೋಪ ಸರಿಯಲ್ಲ. ಏನೇ ಆದರೂ, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಕಡೆಗೆ ನಮ್ಮ ಲಕ್ಷ್ಯ ಇರಬೇಕು ಎಂದು ಹೇಳಿದ್ದಾರೆ.
ಟಿಕೆಟ್ ಘೋಷಣೆಗೂ ಮೊದಲು ಅವರು, ಹಣಕಾಸಿನ ಸಮಸ್ಯೆ ಹೇಳಿರಲಿಲ್ಲ. ತಾವೇ ಎಲ್ಲವನ್ನೂ ನಿಭಾಯಸುವುದಾಗಿ ತಿಳಿಸಿದ್ದರು. ಟಿಕೆಟ್ ವಾಪಸ್ ನೀಡಿದ ಕಾರಣ ಆ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪಕ್ಷ ನಿರ್ಧರಿಸಿದೆ. ಹೈಕಮಾಂಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಹೊಸ ಅಭ್ಯರ್ಥಿಯ ಹೆಸರನ್ನು ಘೋಷಿಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಮಾಜಿ ಸಂಸದ ಬ್ರಜಮೋಹನ್ ಮೊಹಂತಿ ಅವರ ಪುತ್ರಿ ಆಗಿರುವ ಸುಚರಿತಾ ಮೊಹಂತಿ ಅವರು, ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಮತ್ತು ಬಿಜೆಪಿ ಅಭ್ಯರ್ಥಿ ಅರುಪ್ ಪಟ್ನಾಯಕ್ ವಿರುದ್ಧ ಕಣಕ್ಕಿಳಿದಿದ್ದರು.
ಇದನ್ನೂ ಓದಿ: ಚುನಾವಣೆಗೆ ಸ್ಪರ್ಧಿಸುವ ಆಸೆ; ಠೇವಣಿಗಾಗಿ ಸೊಪ್ಪು, ಧಾನ್ಯದ ಮೂಟೆ ಹೊತ್ತು ಡಿಸಿ ಕಚೇರಿಗೆ ಬಂದ ರೈತ! - Farmer strange desire