ಇಂದೋರ್: ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಸೋಮವಾರ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಕ್ಷೇತ್ರದಲ್ಲಿ ಮತದಾನಕ್ಕೆ ಇನ್ನು ಕೇವಲ 15 ದಿನಗಳು ಬಾಕಿ ಇರುವಾಗ ತನ್ನ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವುದು ಕಾಂಗ್ರೆಸ್ ಪಕ್ಷಕ್ಕೆ ಆಘಾತ ಉಂಟುಮಾಡಿದೆ. ಬಾಮ್ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಇಂದೋರ್ ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಖಚಿತಪಡಿಸಿದ್ದಾರೆ.
ಅಕ್ಷಯ್ ಕಾಂತಿ ಬಾಮ್ ಮುಂದಿನ ದಿನಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರುವ ಸಾಧ್ಯತೆಯಿದೆ. ಹಿರಿಯ ಬಿಜೆಪಿ ನಾಯಕ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ಕೈಲಾಶ್ ವಿಜಯವರ್ಗೀಯ ಎಕ್ಸ್ ಖಾತೆಯಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ವಿಜಯವರ್ಗೀಯ ಹಾಗೂ ಬಾಮ್ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿರುವುದು ಕಾಣಿಸುತ್ತದೆ. ಸ್ಥಳೀಯ ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಕೂಡ ಕಾರಿನಲ್ಲಿ ಅವರೊಂದಿಗೆ ಇರುವುದು ಕಾಣಿಸುತ್ತದೆ. ಮೆಂಡೋಲಾ ಅವರು ವಿಜಯವರ್ಗೀಯ ಅವರ ಆಪ್ತರು.
"ಇಂದೋರ್ನ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರನ್ನು ಬಿಜೆಪಿಗೆ ಸ್ವಾಗತಿಸುತ್ತೇವೆ" ಎಂದು ವಿಜಯವರ್ಗೀಯ ಹೇಳಿದರು. ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದ ಶಂಕರ್ ಲಾಲ್ವಾನಿ (62) ವಿರುದ್ಧ ಹೊಸಬರಾದ ಬಾಮ್ (45) ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಇಲ್ಲಿ ಮೇ 13 ರಂದು ಮತದಾನ ನಡೆಯಲಿದೆ.
ಏತನ್ಮಧ್ಯೆ, ಪತ್ರಕಾರ್ ಕಾಲೋನಿಯಲ್ಲಿರುವ ಬಾಮ್ ಅವರ ಮನೆಯ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರು ಅವರ ಮನೆಯ ಹೊರಗೆ ಜಮಾಯಿಸುತ್ತಿದ್ದಾರೆ. ಬಾಮ್ ತಮ್ಮ ರಾಜಕೀಯ ಜೀವನದಲ್ಲಿ ಇದುವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಈ ಮೊದಲೇ ಕಾಂಗ್ರೆಸ್ನ ಮೂವರು ಮಾಜಿ ಶಾಸಕರು ಸೇರಿದಂತೆ ಪಕ್ಷದ ಹಲವಾರು ಕಾರ್ಯಕರ್ತರು ಬಿಜೆಪಿಗೆ ಸೇರಿದ್ದಾರೆ. ಇಂಥ ಸಮಯದಲ್ಲಿ ಕಾಂಗ್ರೆಸ್ ಅಕ್ಷಯ್ ಕಾಂತಿ ಬಾಮ್ ಅವರಿಗೆ ಇಂದೋರ್ನಿಂದ ಸ್ಪರ್ಧಿಸಲು ಅವಕಾಶ ನೀಡಿತ್ತು.
ಸಮಾಜ ಸೇವಾ ಕಾರ್ಯಗಳ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಬಾಮ್ (45) ಇಂದೋರ್ನ ಡಾಲಿ ಕಾಲೇಜಿನಲ್ಲಿ ಶಾಲಾ ಶಿಕ್ಷಣವನ್ನು ಪಡೆದರು. ದೇವಿ ಅಹಲ್ಯಾ ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ ಕೋರ್ಸ್ ಮತ್ತು ಪರ್ಸನಲ್ ಅಡ್ಮಿನಿಸ್ಟ್ರೇಷನ್ನಲ್ಲಿ ಎಂಬಿಎ ಮಾಡಿದ್ದಾರೆ.
ಮತದಾರರ ಸಂಖ್ಯಾ ದೃಷ್ಟಿಯಿಂದ ರಾಜ್ಯದ ಅತಿದೊಡ್ಡ ಕ್ಷೇತ್ರವಾದ ಇಂದೋರ್ನಲ್ಲಿ 25.13 ಲಕ್ಷ ಮತದಾರರಿದ್ದಾರೆ. ಈ ಬಾರಿ ಬಿಜೆಪಿಯು 8 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದೆ.
ಇದನ್ನೂ ಓದಿ : ಆಪ್ನೊಂದಿಗೆ ಮೈತ್ರಿ ವಿರೋಧಿಸಿ ದೆಹಲಿ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ - Delhi Congress president