ಚೆನ್ನೈ, ತಮಿಳುನಾಡು: ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗದ ತಿರುವಳ್ಳೂರಿನ ಕವರೈಪ್ಪೆಟ್ಟೈ ರೈಲು ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಮೈಸೂರಿನಿಂದ ದರ್ಭಾಂಗಕ್ಕೆ ತೆರಳುತ್ತಿದ್ದ ಮೈಸೂರು - ದರ್ಭಂಗಾ ಬಾಗಮತಿ ಎಕ್ಸ್‌ಪ್ರೆಸ್ ರೈಲು ಲೂಪ್ ಲೈನ್‌ಗೆ ತಪ್ಪಾಗಿ ಪ್ರವೇಶಿಸಿದ ಪರಿಣಾಮ ಸ್ಟೇಷನರಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಒಟ್ಟು 12-13 ಬೋಗಿಗಳು ಹಳಿತಪ್ಪಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ರಾತ್ರಿ 8:30 ರ ಸುಮಾರಿಗೆ ಘಟನೆ ನಡೆದಿದೆ.
ಘಟನೆ ಬಗ್ಗೆ ದಕ್ಷಿಣ ರೈಲ್ವೆ ಪ್ರಧಾನ ವ್ಯವಸ್ಥಾಪಕ ಆರ್.ಎನ್.ಸಿಂಗ್ ,"ಬಾಗಮತಿ ಎಕ್ಸ್‌ಪ್ರೆಸ್ ರೈಲಿಗೆ ಕವರೈಪ್ಪೆಟ್ಟೈ ನಿಲ್ದಾಣದಲ್ಲಿ ನಿಗದಿತ ನಿಲುಗಡೆ ಇಲ್ಲ. ಬಾಗಮತಿ ರೈಲು ಇಲ್ಲಿ ನಿಲ್ಲಿಸದೇ ಮುಖ್ಯ ಮಾರ್ಗದ ಮೂಲಕ ಹಾದು ಹೋಗಬೇಕಿತ್ತು. ಮುಖ್ಯ ಮಾರ್ಗಕ್ಕೆ ಸಿಗ್ನಲ್‌ಗಳನ್ನು ಸಹ ಒದಗಿಸಲಾಗಿದೆ. ಆದರೆ, ಸಿಗ್ನಲ್‌ಗಳಿದ್ದರೂ ರೈಲು ಗೂಡ್ಸ್ ರೈಲು ನಿಂತಿದ್ದ ಲೂಪ್ ಲೈನ್‌ಗೆ ಪ್ರವೇಶಿಸಿದ್ದು ಅಸಾಮಾನ್ಯವಾಗಿದೆ. ಬಾಗಮತಿ ರೈಲು ಹಿಂದಿನಿಂದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಇಂಜಿನ್ ಹಳಿ ತಪ್ಪಿತು. ಅದೃಷ್ಟವಶಾತ್ ಲೊಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಹೇಳಿಕೆಗಳನ್ನು ತೆಗೆದುಕೊಂಡ ನಂತರ ನಾವು ಅವರನ್ನು ಬಿಡುಗಡೆ ಮಾಡುತ್ತೇವೆ".
"ರೈಲಿನಲ್ಲಿ ಸುಮಾರು 1,360 ಪ್ರಯಾಣಿಕರಿದ್ದರು. ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ, ರೈಲ್ವೆ ಪೊಲೀಸರು ಮತ್ತು ರಾಜ್ಯ ಪೊಲೀಸರ ರಕ್ಷಣಾ ತಂಡಗಳು, ಆಂಬ್ಯುಲೆನ್ಸ್‌ಗಳು ಮತ್ತು ರೈಲ್ವೆ ವೈದ್ಯರು ಮತ್ತು ಹಿರಿಯ ಅಧಿಕಾರಿಗಳು ಆಗಮಿಸಿದ್ದಾರೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು" ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಮಾಹಿತಿ: "ಅಪಘಾತದ ಮಾಹಿತಿ ಪಡೆದ ಕೂಡಲೇ ನಾವು ಸ್ಥಳಕ್ಕೆ ತಲುಪಿದ್ದೇವೆ. ರಕ್ಷಣಾ ಕಾರ್ಯವನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೂಚನೆ ನೀಡಿದ್ದಾರೆ" ಎಂದು ತಿರುವಳ್ಳೂರಿನ ಜಿಲ್ಲಾಧಿಕಾರಿ ಟಿ. ಪ್ರಭುಶಂಕರ್ ಮಾಧ್ಯಮ ಸಂಸ್ಥೆಗೆ ತಿಳಿಸಿದ್ದಾರೆ. "ಸಿಎಂ ಅವರ ಆದೇಶವನ್ನು ಅನುಸರಿಸಿದ್ದು, ಕಾರ್ಯಾಚರಣೆಯು ವಿಳಂಬವಿಲ್ಲದೇ ಮುಂದುವರಿಯುತ್ತದೆ. ಸದ್ಯ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. 19 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ವರಿಗೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎಲ್ಲರ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ. ಉಳಿದ ಪ್ರಯಾಣಿಕರಿಗೆ ಸಿಎಂ ಆದೇಶದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಅಪಘಾತದ ತನಿಖೆಗೆ 6 ಸದಸ್ಯರ ಉನ್ನತ ಮಟ್ಟದ ಸಮಿತಿ: ರೈಲು ಅಪಘಾತದ ಬಗ್ಗೆ ವಿಸ್ತೃತ ತನಿಖೆಗೆ ದಕ್ಷಿಣ ರೈಲ್ವೇ ಜನರಲ್ ಮ್ಯಾನೇಜರ್ ಆರ್.ಎನ್. ಸಿಂಗ್ ಆದೇಶಿಸಿದ್ದಾರೆ. ತನಿಖೆಗಾಗಿ 6 ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಈ ತಂಡವು ಅಪಘಾತ ಸ್ಥಳವನ್ನು ಪರಿಶೀಲಿಸುತ್ತದೆ. ರೈಲು ಕಾರ್ಯಾಚರಣೆಯ ಕಾರಣ, ಸಿಗ್ನಲ್, ತಾಂತ್ರಿಕ ದೋಷದ ಬಗ್ಗೆ ತನಿಖೆ ನಡೆಸಿ ವರದಿಯನ್ನು ಸಲ್ಲಿಸುತ್ತದೆ. ಅಪಘಾತಕ್ಕೆ ಮಾನವ ದೋಷ ಅಥವಾ ತಾಂತ್ರಿಕ ದೋಷವೇ ಕಾರಣ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಲಿದ್ದು. ಅದರಂತೆ ಉನ್ನತ ಮಟ್ಟದ ತಂಡ ಇಲಾಖಾ ಕ್ರಮ ಕೈಗೊಳ್ಳಲಿದೆ.
ಬಾಗ್ಮತಿ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಪರ್ಯಾಯ ರೈಲು: ಬಾಗಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಕರೆತಂದು ವಿಶೇಷ ರೈಲಿನ ಮೂಲಕ ಅವರ ಊರುಗಳಿಗೆ ಕಳುಹಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಇಲಾಖೆ ತಿಳಿಸಿದೆ. ಬಾಗಮತಿ ರೈಲಿನಲ್ಲಿ ಹೆಚ್ಚಿನ ಪ್ರಯಾಣಿಕರು ಉತ್ತರ ರಾಜ್ಯಗಳಿಂದ ಬಂದವರು ಎಂದು ವರದಿಯಾಗಿದೆ.
ಈ ಕುರಿತು ದಕ್ಷಿಣ ರೈಲ್ವೆ ಪ್ರಕಟಿಸಿರುವ ಎಕ್ಸ್ ವರದಿಯಲ್ಲಿ "ಅಪಘಾತಕ್ಕೀಡಾದ ಬಾಗಮತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಚೆನ್ನೈ ಸಿಟಿ ಬಸ್ ಮೂಲಕ ಸುರಕ್ಷಿತವಾಗಿ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಕರೆತರಲಾಗಿದೆ" ಎಂದು ಹೇಳಿದೆ. ದಕ್ಷಿಣ ರೈಲ್ವೆ ಬಿಡುಗಡೆ ಮಾಡಿದ ಮತ್ತೊಂದು ಎಕ್ಸ್ ವರದಿಯಲ್ಲಿ, "ಅಪಘಾತಕ್ಕೀಡಾದ ಬಾಗಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಎಂಜಿಆರ್ ಸೆಂಟ್ರಲ್ ರೈಲು ನಿಲ್ದಾಣದಿಂದ ವಿಶೇಷ ರೈಲಿನ ಮೂಲಕ ಇಂದು ಬೆಳಿಗ್ಗೆ 4.45ಕ್ಕೆ ಕಳುಹಿಸಲಾಗಿದೆ. ಅವರಿಗೆ ಆಹಾರ ಮತ್ತು ಕುಡಿಯುವ ನೀರು ಒದಗಿಸಲಾಗಿದೆ" ಎಂದು ಅದು ತಿಳಿಸಿದೆ.
ಇದನ್ನೂ ಓದಿ: ಚೆನ್ನೈ ಸಮೀಪ ಗೂಡ್ಸ್ ರೈಲಿಗೆ ಮೈಸೂರು-ದರಭಂಗಾ ಎಕ್ಸ್‌ಪ್ರೆಸ್ ಡಿಕ್ಕಿ: ಹಳಿ ತಪ್ಪಿದ 13 ಬೋಗಿಗಳು