ಭರುಚ್(ಗುಜರಾತ್): ಧಾರ್ಮಿಕ ಧ್ವಜ ಅಳವಡಿಕೆ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಉಂಟಾದ ಕೋಮು ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡ ಘಟನೆ ಗುಜರಾತ್ನ ಭರುಚ್ ನಗರದಲ್ಲಿ ನಡೆದಿದೆ. 17 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ರಾತ್ರಿ ಭರುಚ್ನ ಗೋಕುಲ್ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುದ್ದಿ ತಿಳಿದು ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಈ ವೇಳೆ ಗಲಭೆಕೋರರು ಓಡಿಹೋಗಿದ್ದಾರೆ. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಸಮುದಾಯದ ಉದ್ರಿಕ್ತರು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅನೇಕ ವಾಹನಗಳು ಜಖಂಗೊಂಡಿವೆ ಎಂದು ಎಸ್ಪಿ ಮಯೂರ್ ಛವ್ಡಾ ಮಾಹಿತಿ ನೀಡಿದ್ದಾರೆ.
ಗೋಕುಲ್ ನಗರದಲ್ಲಿ ಧಾರ್ಮಿಕ ಧ್ವಜ ಅಳವಡಿಕೆ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಗಲಭೆ ಉಂಟಾಗಿದೆ. ಒಂದು ಸಮುದಾಯ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಹಿಂಸಾಚಾರದಲ್ಲಿ ಭಾಗಿಯಾದ ಮತ್ತೊಂದು ಸಮುದಾಯದ 17 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಗೋಕುಲ್ ನಗರ ಎರಡು ಸಮುದಾಯದ ಜನರನ್ನು ಹೊಂದಿರುವ ಪ್ರದೇಶ. ಈದ್ ಮಿಲಾದ್ ಹಿನ್ನೆಲೆಯಲ್ಲಿ ಧಾರ್ಮಿಕ ಧ್ವಜ ಮತ್ತು ಬ್ಯಾನರ್ ಕಟ್ಟುವ ಸಲುವಾಗಿ ಘರ್ಷಣೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿಂಸಾಚಾರದಲ್ಲಿ ಭಾಗಿಯಾದ 20 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ಛವ್ಡಾ ತಿಳಿಸಿದರು.
ಭಾನುವಾರ ಸೂರತ್ನಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಣೇಶ ಪೆಂಡಾಲ್ ಮೇಲೆ ಕೆಲವು ದುಷ್ಕರ್ಮಿಗಳು ಕಲ್ಲೆಸೆದ ಪರಿಣಾಮ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆರು ಅಪ್ರಾಪ್ತರು ಸೇರಿದಂತೆ 27 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಶಿಮ್ಲಾದಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ; ಪೊಲೀಸರಿಂದ ಬಿಗಿ ಭದ್ರತೆ