ಕೋಲ್ಕತ್ತಾ(ಪಶ್ಚಿಮ ಬಂಗಾಳ): ಭಾರೀ ಆಕ್ರೋಶಕ್ಕೆ ಕಾರಣವಾಗಿರುವ ಸಂದೇಶ್‌ಖಾಲಿ ಹಿಂಸಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ದಳಕ್ಕೆ (ಸಿಐಡಿ) ಗುರುವಾರ ರಾಜ್ಯ ಸರ್ಕಾರ ವಹಿಸಿದೆ. ಇದೇ ವೇಳೆ ಬಂಧಿತ ಪ್ರಮುಖ ಆರೋಪಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶೇಖ್ ಷಹಜಹಾನ್‌ನನ್ನು ಕೋರ್ಟ್ 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಭೂ ಕಬಳಿಕೆ, ಹಿಂಸಾಚಾರ, ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಶೇಖ್ ಷಹಜಹಾನ್‌ನನ್ನು ಬುಧವಾರ ರಾತ್ರಿ ಬಂಧಿಸಲಾಗಿತ್ತು. ಬಳಿಕ ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಿದ ಪೊಲೀಸರು 14 ದಿನಗಳ ಕಾಲ ಕಸ್ಟಡಿಗೆ ನೀಡಬೇಕು ಎಂದು ಕೋರಿದರು. ಕೋರ್ಟ್ 10 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ಇದರ ಬೆನ್ನಲ್ಲೇ, ಪ್ರಕರಣದ ನ್ಯಾಯಯುತ ತನಿಖೆಗಾಗಿ ಪಶ್ಚಿಮ ಬಂಗಾಳ ಪೊಲೀಸರ ಬದಲಿಗೆ ಸಿಐಡಿಗೆ ನೀಡಬೇಕು ಎಂದು ಒತ್ತಾಯ ಕೇಳಿಬಂದಿತ್ತು. ಇದರಿಂದ ಸರ್ಕಾರ ಪ್ರಕರಣದ ತನಿಖೆಯಲ್ಲಿ ಸಿಐಡಿಗೆ ನೀಡಿ ಗುರುವಾರ ಆದೇಶಿಸಿದೆ. ಅಕ್ರಮ ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ಶೇಖ್ ಷಹಜಹಾನ್ ಮನೆ ಮೇಲೆ ಇಡಿ ಅಧಿಕಾರಿಗಳು ಜನವರಿ 5ರಂದು ಶೋಧ ಕಾರ್ಯಾಚರಣೆಗೆ ಬಂದಾಗ, ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಅಲ್ಲದೇ, ಮಹಿಳೆಯನ್ನು ಎಳೆದೊಯ್ದ ಟಿಎಂಸಿ ಕಚೇರಿಯೊಳಗೆ ಅತ್ಯಾಚಾರ ನಡೆಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಪೊಲೀಸ್ ಕಸ್ಟಡಿಯಲ್ಲಿರುವ ಶೇಖ್ ಷಹಜಾನ್‌ನನ್ನು ಮುಂದಿನ 10 ದಿನಗಳ ಕಾಲ ಭಬಾನಿ ಭವನದಲ್ಲಿರುವ ಸಿಐಡಿ ಲಾಕ್‌ಅಪ್‌ನಲ್ಲಿ ಇರಿಸಲಾಗುವುದು. ಸಿಐಡಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂದು ರಾಜ್ಯ ಪೊಲೀಸ್ ಮೂಲಗಳು ತಿಳಿಸಿವೆ.
ಸಿಬಿಐಗೆ ನೀಡಲು ಕೋರಿ ಪಿಐಎಲ್: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎನ್ನಲಾದ ಸಂದೇಶ್‌ಖಾಲಿ ಪ್ರಕರಣವನ್ನು ಸಿಬಿಐ ಅಥವಾ ಎಸ್‌ಐಟಿಗೆ ವರ್ಗಾಯಿಸುವಂತೆ ಕೋರಿ ಕೋಲ್ಕತ್ತಾ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಅದರ ವಿಚಾರಣೆ ಸೋಮವಾರ ನಡೆಯಲಿದೆ.
ಅರ್ಜಿದಾರ, ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಹಾಕಿದ್ದು, ಇದರ ವಿಚಾರಣೆ ಸೋಮವಾರ ನಡೆಯಲಿದೆ. ಸಂದೇಶ್ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಭೂ ಕಬಳಿಕೆ ಆರೋಪದ ಮೇಲೆ ಈ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ನೇತೃತ್ವದ ವಿಭಾಗೀಯ ಪೀಠವು ಸೋಮವಾರ ಸುಮೊಟೊ ಕೇಸ್ ಜೊತೆಗೆ ಪಿಐಎಲ್ ಅನ್ನು ವಿಚಾರಣೆಗೆ ಪಟ್ಟಿ ಮಾಡಿದೆ ಎಂದು ಹೇಳಿದರು. ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ಪೀಠವು, ಈ ಕುರಿತು ಕಕ್ಷಿದಾರರಿಗೆ ನೋಟಿಸ್ ನೀಡುವಂತೆ ಅರ್ಜಿದಾರರಿಗೆ ಸೂಚಿಸಿದೆ.
ಪ್ರಕರಣದ ತನಿಖೆ ನಡೆಸಲು ಹೈಕೋರ್ಟ್‌ನ ಮೂವರು ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: ಸಂದೇಶಖಾಲಿ ಹಿಂಸಾಚಾರ ಪ್ರಕರಣ: ಪ್ರಮುಖ ಆರೋಪಿ ಶೇಖ್ ಷಹಜಹಾನ್ ಬಂಧನ