ಜಮ್ಮು ಮತ್ತು ಕಾಶ್ಮೀರ: ಸಶಸ್ತ್ರ ಭಯೋತ್ಪಾದಕರ ಪತ್ತೆ ಮಾಡಲು ಜಮ್ಮು ಮತ್ತು ಕಾಶ್ಮೀರದ ದೇಸಾ ದೋಡಾದಲ್ಲಿ ಭಾರತೀಯ ಸೇನೆಯ ಜಂಟಿ ತಂಡ, ಸೇನಾ ಕಮಾಂಡ್‌ಗಳು, ವಿಶೇಷ ಪೊಲೀಸ್ ತಂಡ ಮತ್ತು ಅರೆಸೇನಾ ಪಡೆಗಳಿಂದ ಬೃಹತ್ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಲಾಗುತ್ತಿದೆ.
ನಿನ್ನೆ (ಸೋಮವಾರ) ಸಂಜೆ ದೋಡಾ ಜಿಲ್ಲೆಯ ದೇಸಾ ಅರಣ್ಯ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಭಾರತೀಯ ಸೇನಾ ಯೋಧರು ಹುತಾತ್ಮರಾಗಿದ್ದರು. ಗುಂಡಿನ ಚಕಮಕಿಯಲ್ಲಿ ಒಬ್ಬ ಸೇನಾ ಅಧಿಕಾರಿ ಸೇರಿದಂತೆ ಐವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ ಒಬ್ಬ ಯೋಧ ಸೇನಾ ಆಸ್ಪತ್ರೆಯಲ್ಲಿ ಸಾವು - ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ತೀವ್ರಗೊಂಡ ಶೋಧ ಕಾರ್ಯಾಚರಣೆ, ಹೈಟೆಕ್ ಸ್ಪೆಕ್ಟ್ರಮ್ ಡ್ರೋನ್ ಬಳಕೆ: ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಭದ್ರತಾ ಪಡೆಗಳು ವಿಶೇಷ ಪಡೆಗಳನ್ನು ನಿಯೋಜಿಸಿವೆ. ಹಲವಾರು ಕಿಲೋಮೀಟರ್ ದೂರದವರೆಗೆ ವಿಡಿಯೋಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿರುವ ಹೈ-ಡೆಫಿನಿಷನ್ ಕ್ಯಾಮೆರಾಗಳನ್ನು ಹೊಂದಿರುವ ಹೈಟೆಕ್ ಸ್ಪೆಕ್ಟ್ರಮ್ ಡ್ರೋನ್‌ಗಳನ್ನು ಬಳಸಿಕೊಂಡು ಶೋಧ ಕಾರ್ಯಾಚರಣೆಗಳನ್ನು ಮಾಡಲಾಗುತ್ತಿದೆ. ದಾಳಿ ನಡೆಸಿದ ಉಗ್ರರ ಪತ್ತೆಗಾಗಿ ಸೇನಾ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸೋಮವಾರ ಸಂಜೆಯಿಂದಲೇ ದೋಡಾ ಪಟ್ಟಣದ ಪೂರ್ವಕ್ಕೆ 35 ಕಿ.ಮೀ. ದೂರದಲ್ಲಿರುವ ದೇಸಾ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಭಯೋತ್ಪಾದಕರು ದೇಸಾ ಅರಣ್ಯದಲ್ಲಿ ಇರುವ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿರುವ ಹಿನ್ನೆಲೆ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಸೇನಾ ಮುಖ್ಯಸ್ಥರೊಂದಿಗೆ ರಾಜನಾಥ್ ಮಾತುಕತೆ: ಜಮ್ಮು ಕಾಶ್ಮೀರದ ದೇಸಾ ದೋಡಾದಲ್ಲಿ ಶಸ್ತ್ರಸಜ್ಜಿತ ಉಗ್ರರನ್ನು ಸದೆಬಡಿಯಲು ಸೇನೆ, ಕಮಾಂಡ್‌ಗಳು, ವಿಶೇಷ ಪೊಲೀಸ್ ಗುಂಪು ಮತ್ತು ಅರೆಸೇನಾ ಪಡೆಗಳ ಜಂಟಿ ತಂಡದಿಂದ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಈ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರೊಂದಿಗೆ ಇಂದು (ಮಂಗಳವಾರ) ಮಾತುಕತೆ ನಡೆಸಿದರು. ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿನ ಪರಿಸ್ಥಿತಿ ಮತ್ತು ನಡೆಯುತ್ತಿರುವ ಕಾರ್ಯಾಚರಣೆಯ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಕಚೇರಿ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಉಗ್ರರೊಂದಿಗೆ ಗುಂಡಿನ ಕಾಳಗ - ಅಧಿಕಾರಿ ಸೇರಿ ನಾಲ್ವರು ಯೋಧರು ಹುತಾತ್ಮ - Soldiers killed in JK