ಹೈದರಾಬಾದ್: ಭಾರತ ಎಂದರೆ ಗುಟುರು ಹಾಕುವ ಚೀನಾದಲ್ಲಿ ಬುದ್ಧನ ಆರಾಧನೆ ಬಿಟ್ಟು ಬೇರೆ ದೈವಾರಾಧನೆಗೆ ಪ್ರಾಧಾನ್ಯತೆ ಇಲ್ಲ. ಇಂತಿಪ್ಪ, ಡ್ರ್ಯಾಗನ್ ರಾಷ್ಟ್ರದ ಯೋಧರು ನೈಜ ಗಡಿ ರೇಖೆ (ಎಲ್ಎಸಿ)ಯಲ್ಲಿ ನಿಂತು 'ಜೈ ಶ್ರೀರಾಮ್' ಎಂದು ಘೋಷಣೆ ಕೂಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶತಮಾನಗಳ ಕಾಯುವಿಕೆಯ ನಂತರ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಜನವರಿ 22 ರಂದು ಉದ್ಘಾಟನೆಯಾಗಿದೆ. ಇದು ದೇಶ - ವಿದೇಶದಲ್ಲಿನ ರಾಮ ಭಕ್ತರಿಗೆ ಅಪರಿಮಿತ ಸಂತಸ ತಂದಿದೆ. ದಿವ್ಯ ದೇಗುಲದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ಪ್ರಧಾನಿ ಮೋದಿ ಅವರು ಪ್ರಥಮ ಪುಷ್ಪಾರ್ಚನೆ ಮಾಡುವ ಮೂಲಕ ರಘುರಾಮನನ್ನು ಅನಾವರಣ ಮಾಡಿದರು. ದೇಶದಲ್ಲಿ ಭಕ್ತಿಭಾವದ ಸಂಭ್ರಮ ಮನೆ ಮಾಡಿದ್ದರೆ, ಚೀನಾ ಯೋಧರೂ ಇದರಲ್ಲಿ ಭಾಗಿಯಾಗಿ ಅಚ್ಚರಿ ಉಂಟು ಮಾಡಿದ್ದಾರೆ.
ಚೀನೀ ಯೋಧರ ರಾಮಜಪ: ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ಗಡಿ ರೇಖೆಯಲ್ಲಿ ಉದ್ವಿಗ್ನ ವಾತಾವರಣ ಇರುವುದು ತಿಳಿದೇ ಇದೆ. ಎರಡೂ ದೇಶಗಳ ಸೇನಾ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಲು ಹಲವು ಬಾರಿ ಮಾತುಕತೆ ನಡೆಸಿದ್ದಾರೆ. ಕುತೂಹಲಕಾರಿ ಘಟನೆಯೊಂದರಲ್ಲಿ ಗಡಿಯಲ್ಲಿ ಗಸ್ತು ತಿರುಗುವ ವೇಳೆ ಎದುರು ಸಿಕ್ಕ ಚೀನೀ ಯೋಧರಿಗೆ ಭಾರತದ ಯೋಧರು 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಲು ಹೇಳಿದ್ದಾರೆ. ಜೈ ಶ್ರೀರಾಮ್ ಹೇಗೆ ಉಚ್ಚರಿಸಬೇಕೆಂದು ಭಾರತೀಯ ಸೈನಿಕರು ಹೇಳುತ್ತಿರುವುದನ್ನು ವಿಡಿಯೋದಲ್ಲಿದೆ.
ನಮ್ಮ ಸೈನಿಕರು ಹೇಳಿದಂತೆ ಚೀನೀಯರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಾರೆ. ಇದು ಯಾವಾಗ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲವಾದರೂ, ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಯ ದಿನದಂದು ಮಾಜಿ ಸೈನಿಕರೊಬ್ಬರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಅದು ವೈರಲ್ ಆಗುತ್ತಿದೆ.
ಜೈಶ್ರೀರಾಮ್ ಘೋಷಣೆಗೆ ರಾಹುಲ್ ಸಿಡಿಮಿಡಿ: ಪೂರ್ವದಿಂದ ಪಶ್ಚಿಮಕ್ಕೆ ಭಾರತ ಜೋಡೋ ನ್ಯಾಯ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜೈಶ್ರೀರಾಮ್ ಘೋಷಣೆಯು ಎದುರಾಗಿದೆ. ಅಸ್ಸೋಂನಲ್ಲಿ ಯಾತ್ರೆ ಸಾಗುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಪಕ್ಷದ ಬಾವುಟ ಹಿಡಿದುಕೊಂಡು ಜೈ ಶ್ರೀರಾಮ್, ಅನ್ಯಾಯ್ ಯಾತ್ರೆ ಎಂದು ಘೋಷಣೆ ಕೂಗಿದ್ದಾರೆ.
ಇದರಿಂದ ಸಿಡಿಮಿಡಿಗೊಂಡ ರಾಹುಲ್ ಗಾಂಧಿ ಬಸ್ನಿಂದ ಕೆಳಗಿಳಿದು ಬಂದು ಕಾರ್ಯಕರ್ತರ ಬಳಿ ವಾಗ್ವಾದ ಮುಂದಾಗಿದ್ದರು. ಬಳಿಕ ಅವರನ್ನು ವಾಪಸ್ ಬಸ್ ಹತ್ತಿಸಲಾಯಿತು. ಇದರ ನಂತರ ಕಿಟಕಿಯಿಂದ ಫ್ಲೈಯಿಂಗ್ ಕಿಸ್ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ: ರಾಮಲಲ್ಲಾ ಕಾಣಲು ಕಾತುರ: ಮೊದಲ ದಿನವೇ 3 ಲಕ್ಷ ಭಕ್ತರಿಂದ ಪುರುಷೋತ್ತಮನ ದರ್ಶನ