ನಾಡಿಯಾದ್ (ಗುಜರಾತ್): ಗುಜರಾತ್ನ ಅಹಮದಾಬಾದ್-ವಡೋದರಾ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಿಂತಿದ್ದ ಟ್ರಕ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಐದು ವರ್ಷದ ಮಗು ಸೇರಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಖೇಡಾ ಜಿಲ್ಲೆಯ ನಾಡಿಯಾಡ್ ಪಟ್ಟಣದ ಸಮೀಪದ ಎಕ್ಸ್‌ಪ್ರೆಸ್‌ವೇಯಲ್ಲಿ ಈ ದುರ್ಘಟನೆ ನಡೆದಿದೆ. ಮೃತರೆಲ್ಲರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ವೇಗವಾಗಿ ಬಂದ ಕಾರು ಟ್ರಕ್‌ಗೆ ಗುದ್ದಿದ ಕಾರಣ ದುರಂತ ಸಂಭವಿಸಿದೆ. ಇದರಲ್ಲಿ ಎಂಟು ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರಲ್ಲಿ ಕಾರಿನ ಚಾಲಕ ಮತ್ತು ಐದು ವರ್ಷದ ಮಗು ಕೂಡ ಸೇರಿದೆ. ಈ ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಖೇಡಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಗಧಿಯಾ ಮಾತನಾಡಿ, ಮಹಾರಾಷ್ಟ್ರದ ನೋಂದಾಯಿತ ಟ್ರಕ್ ಯಾಂತ್ರಿಕ ದೋಷದಿಂದ ಎಕ್ಸ್‌ಪ್ರೆಸ್‌ವೇಯ ಎಡ ಲೇನ್‌ನಲ್ಲಿ ನಿಂತಿತ್ತು. ಈ ವೇಳೆ, ಕಾರು ಹಿಂಬದಿಯಿಂದ ಬಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದರಿಂದ ಕಾರಿನಲ್ಲಿದ್ದ ಎಲ್ಲ ಹತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಗುಜರಾತ್ ನೋಂದಣಿಯ ಕಾರು ವಡೋದರಾದಿಂದ ಅಹಮದಾಬಾದ್ ಕಡೆಗೆ ಹೋಗುತ್ತಿತ್ತು. ಟ್ರಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಎಂಟು ಜನರು ಸ್ಥಳದಲ್ಲೇ ಅಸುನೀಗಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದರು. ಅವರನ್ನು ಆಂಬ್ಯುಲೆನ್ಸ್ ಮೂಲಕ ನಾಡಿಯಾಡ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರೂ ಕೊನೆಯುಸಿರೆಳೆದಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದರು.
ಇನ್ನು, ಟ್ರಕ್ ಮಹಾರಾಷ್ಟ್ರದ ಪುಣೆಯಿಂದ ಜಮ್ಮುವಿಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ನಾಡಿಯಾಡ್ ಬಳಿ ಯಾಂತ್ರಿಕ ದೋಷ ಉಂಟಾಗಿದೆ. ಕಾರಿನಲ್ಲಿದ್ದ ಮೃತ ಪ್ರಯಾಣಿಕರು ವಡೋದರಾ, ನಾಡಿಯಾಡ್ ಮತ್ತು ಅಹಮದಾಬಾದ್ ಸೇರಿದಂತೆ ವಿವಿಧ ನಗರಗಳಿಗೆ ಸೇರಿದ್ದಾರೆ. ಮೃತರಲ್ಲಿ ಇದುವರೆಗೆ ನಾಲ್ವರ ಗುರುತು ಪತ್ತೆ ಹಚ್ಚಲಾಗಿದೆ. ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ರಾಜಸ್ಥಾನದ ಕಾರು ದುರಂತದ ಘಟನೆ: ಎಪ್ರಿಲ್ 14ರಂದು ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಭೀಕರ ರಸ್ತೆ ದುರಂತ ಸಂಭವಿಸಿತ್ತು. ಟ್ರಕ್‌ಗೆ ಡಿಕ್ಕಿ ಹೊಡೆದ ಕಾರಿನಲ್ಲಿ ಬೆಂಕಿ ಹೊತ್ತುಕೊಂಡು ಇಬ್ಬರು ಮಕ್ಕಳು, ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿ ಸಜೀವ ದಹನವಾಗಿದ್ದರು. ಮೃತರೆಲ್ಲರೂ ಉತ್ತರ ಪ್ರದೇಶದ ಮೀರತ್ ನಿವಾಸಿಗಳು ಎಂದು ಗುರುತಿಸಲಾಗಿತ್ತು. ಇವರು ಸಲಾಸರ್ ಬಾಲಾಜಿ ದೇವಸ್ಥಾನದಿಂದ ಹಿಸಾರ್‌ಗೆ ಹೋಗುತ್ತಿದ್ದಾಗ ಈ ಅಪಘಾತ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: ಟ್ರಕ್‌ಗೆ ಗುದ್ದಿದ ಕಾರಿನಲ್ಲಿ ಬೆಂಕಿ: ಮಕ್ಕಳು, ಮಹಿಳೆಯರು ಸೇರಿ ಏಳು ಮಂದಿ ಸಜೀವ ದಹನ