ಮುಂಬೈ: ಭೂಗತ ಪಾತಕಿ ಛೋಟಾ ಶಕೀಲ್‌ನ ಸೋದರ ಮಾವ ಅಬು ಬಕರ್ ಶೇಖ್ ಅಲಿಯಾಸ್ ಆರಿಫ್ ಭಾಯಿಜಾನ್ ಎದೆನೋವಿನ ಕಾರಣ ಆರ್ಥರ್ ರೋಡ್ ಜೈಲಿನಿಂದ ಸರ್ ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಸಮಯದಲ್ಲಿ ಅಬು ಬಕರ್ ಶೇಖ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
2022ರಲ್ಲಿ ಅರೆಸ್ಟ್ ಆಗಿದ್ದ ಛೋಟಾ ಶಕೀಲ್‌ನ ಸೋದರ ಮಾವ: ಭೂಗತ ಪಾತಕಿ ಛೋಟಾ ಶಕೀಲ್‌ನ ಸೋದರ ಮಾವ ಆರಿಫ್ ಅಬು ಬಕರ್ ಶೇಖ್ ಅಲಿಯಾಸ್ ಆರಿಫ್ ಭಾಯಿಜಾನ್ನನ್ನು ಫೆಬ್ರವರಿ 2022 ರಲ್ಲಿ ಮೀರಾ ರೋಡ್‌ನಿಂದ ಎನ್‌ಐಎ ಬಂಧಿಸಿತು. ಆರಿಫ್ ಭಾಯಿಜಾನ್ ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ದರೋಡೆಕೋರ ಛೋಟಾ ಶಕೀಲ್‌ನ ಎಲ್ಲಾ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ ಎಂದು ಎನ್ಐಎ ತಿಳಿಸಿದೆ.
ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಆರಿಫ್ ಭಾಯಿಜಾನ್ ಶುಕ್ರವಾರ ಸಂಜೆ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದನು. ಜೈಲು ಅಧಿಕಾರಿಗಳು ಸಂಜೆ 7 ಗಂಟೆಗೆ ಮುಂಬೈನ ಜೆಜೆ ಆಸ್ಪತ್ರೆಗೆ ಕರೆತಂದರು. ಆರಿಫ್ ಭಾಯಿಜಾನ್ಗೆ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ, ರಾತ್ರಿ 7.30ಕ್ಕೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಛೋಟಾ ಶಕೀಲ್‌ನ ಸೋದರ ಮಾವನ ಮೇಲಿನ ಆರೋಪಗಳು: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾವೂದ್, ಅವನ ಸಹೋದರ ಅನೀಸ್ ಮತ್ತು ಛೋಟಾ ಶಕೀಲ್ ಮತ್ತು ಇತರರ ವಿರುದ್ಧ ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾದಕವಸ್ತು- ಭಯೋತ್ಪಾದನೆ, ಹಣ ವರ್ಗಾವಣೆ, ನಕಲಿ ಭಾರತೀಯ ನೋಟುಗಳ ಚಲಾವಣೆ ಮತ್ತು ಇತರ ಆರೋಪಗಳ ಮೇಲೆ 3 ಫೆಬ್ರವರಿ 2022 ರಂದು ಪ್ರಕರಣವನ್ನು ದಾಖಲಿಸಿತ್ತು.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರಿಫ್ ಅಬೂಬಕರ್ ಶೇಖ್ ಅಲಿಯಾಸ್ ಆರಿಫ್ ಭಾಯಿಜಾನ್ನನ್ನು ಮೀರಾ ರೋಡ್ ನಿವಾಸದಲ್ಲಿ ಬಂಧಿಸಿತ್ತು. ಎನ್‌ಐಎ ಅಧಿಕಾರಿಗಳು ಮೀರಾ ರೋಡ್ (ಪೂರ್ವ) ಮಂಗಲ್ ನಗರ ಪ್ರದೇಶದಲ್ಲಿ ಗೌರವ್ ಗ್ರೀನ್ ಕೋ -ಆಪರೇಟಿವ್ ಹೌಸಿಂಗ್ ಸೊಸೈಟಿಗೆ ಸೇರಿದ ಫ್ಲ್ಯಾಟ್ ಅನ್ನು ವಶಪಡಿಸಿಕೊಂಡಿತ್ತು. 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 25 (1) ರ ಅಡಿಯಲ್ಲಿ ಭಯೋತ್ಪಾದನೆಯ ಆದಾಯ ಎಂದು ಫ್ಲಾಟ್ ಅನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಛೋಟಾ ಶಕೀಲ್‌ನ ಸೋದರ ಮಾವ ಆರೀಫ್ ಅಬೂಬಕರ್ ಶೇಖ್ ವಿರುದ್ಧ ಅಕ್ಟೋಬರ್ 10, 2022 ರಂದು ಸುಲಿಗೆ ಪ್ರಕರಣ ದಾಖಲಿಸಲಾಗಿತ್ತು. ತನಿಖಾ ಸಂಸ್ಥೆಯು 2022 ರಲ್ಲಿ ಮೂವರು ಆರೋಪಿಗಳಾದ ಛೋಟಾ ಶಕೀಲ್‌ನ ಸೋದರ ಆರಿಫ್ ಭಾಯಿಜಾನ್, ಅವನ ಸಹೋದರ ಶಬ್ಬೀರ್ ಅಬೂಬಕರ್ ಶೇಖ್ ಅಲಿಯಾಸ್ ಶಬ್ಬೀರ್ ಟಕಾಲಾ ಮತ್ತು ಛೋಟಾ ಶಕೀಲ್‌ನ ಸೋದರ ಮಾವ ಮೊಹಮ್ಮದ್ ಸಲೀಂ ಖುರೇಷಿ ಅಲಿಯಾಸ್ ಸಲೀಂನನ್ನು ಬಂಧಿಸಿತ್ತು.
ಬಂಧಿತ ಆರೋಪಿಗಳು ಭಯೋತ್ಪಾದಕ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸಲು ಡಿ ಕಂಪನಿಯ ಹೆಸರಿನಲ್ಲಿ ಆಸ್ತಿ ವಹಿವಾಟು ಮತ್ತು ವಿವಾದಗಳನ್ನು ಇತ್ಯರ್ಥಪಡಿಸುವ ಮೂಲಕ ಭಾರಿ ಮೊತ್ತದ ಹಣವನ್ನು ಸುಲಿಗೆ ಮಾಡುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದು ಎನ್ಐಎ ಹೇಳಿದೆ.