ಡೆಹ್ರಾಡೂನ್ (ಉತ್ತರಾಖಂಡ್): ಉತ್ತರಾಖಂಡ್ನ ಪ್ರಸಿದ್ಧ ಗಂಗೋತ್ರಿ, ಯಮುನೋತ್ರಿ, ಬದ್ರಿನಾಥ್, ಕೇದಾರನಾಥ್ ಸೇರಿ ಚಾರ್‌ಧಾಮ್ ಯಾತ್ರೆ ಮುಂದುವರೆದಿದೆ. ಕಠಿಣವಾದ ಯಾತ್ರೆಯ ಮಾರ್ಗ ಮಧ್ಯದಲ್ಲಿ ಭಕ್ತರ ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಕಳೆದ 15 ದಿಗಳಲ್ಲಿ ಮೃತರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ.
ಮೇ 10ರಿಂದ ಚಾರ್‌ಧಾಮ್ ಯಾತ್ರೆಯಲ್ಲಿ ಶುರುವಾಗಿದೆ. ಈ ಬಾರಿಯ ಯಾತ್ರೆಯು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಂದೆಡೆ ಚಾರ್‌ಧಾಮ್‌ನಲ್ಲಿ ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಸರ್ಕಾರ ನಿರತವಾಗಿದ್ದರೆ, ಇನ್ನೊಂದೆಡೆ ಭಕ್ತರ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಮಾಹಿತಿಯ ಪ್ರಕಾರ, ಮೇ 25ರಂದು ಬೆಳಗ್ಗೆ 10.30ರವರೆಗೆ ಒಟ್ಟಾರೆ 56 ಭಕ್ತರು ಸಾವನ್ನಪ್ಪಿದ್ದಾರೆ.
ಈ ಪೈಕಿ ಕೇದಾರನಾಥ ಧಾಮದಲ್ಲಿ ಗರಿಷ್ಠ 27 ಭಕ್ತರು, ಬದರಿನಾಥ ಧಾಮದಲ್ಲಿ 14, ಯಮುನೋತ್ರಿ ಧಾಮದಲ್ಲಿ 12 ಮತ್ತು ಗಂಗೋತ್ರಿಯಲ್ಲಿ ಮೂವರು ಭಕ್ತರು ಕೊನೆಯುಸಿರೆಳೆದಿದ್ದಾರೆ. ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಕೇದಾರನಾಥದಲ್ಲಿ ನಾಲ್ವರು ಭಕ್ತರು ಮೃತಪಟ್ಟಿದ್ದಾರೆ. ಈ ಎಲ್ಲ ಭಕ್ತರ ಸಾವುಗಳು ಚಾರ್‌ಧಾಮ್ ಯಾತ್ರೆಯ ಮಾರ್ಗದಲ್ಲೇ ಸಂಭವಿಸಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 2023ರ ಚಾರ್‌ಧಾಮ್ ಯಾತ್ರೆಯ ಸಮಯದಲ್ಲಿ ಸುಮಾರು 250 ಭಕ್ತರು ಸಾವನ್ನಪ್ಪಿದ್ದರು.
25ರಷ್ಟು ಹೆಚ್ಚು ವೈದ್ಯಕೀಯ ಸಿಬ್ಬಂದಿ: ಉತ್ತರಾಖಂಡ ಆರೋಗ್ಯ ಇಲಾಖೆಯ ಮಹಾನಿರ್ದೇಶಕ ಡಾ.ವಿನೀತಾ ಶಾ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಾರ್ ಧಾಮ್ ಯಾತ್ರೆಗೆ ಒಟ್ಟಾರೆ ಸಿಬ್ಬಂದಿ ಪೈಕಿ ಶೇ.25ಕ್ಕಿಂತ ಹೆಚ್ಚಿನ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಳೆದ ವರ್ಷ ಬೆಳಕಿಗೆ ಬಂದ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಿದ ನಂತರವೇ ಕ್ಷೇತ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಭಕ್ತರ ಸಾವಿಗೆ ಸಂಬಂಧಿಸಿದ ಸಂಪೂರ್ಣ ದತ್ತಾಂಶವನ್ನು ಆರೋಗ್ಯ ಇಲಾಖೆ ವಿಶ್ಲೇಷಿಸಲಿದೆ. ಇದಲ್ಲದೇ, ವೈದ್ಯರ ತಂಡವನ್ನೂ ರಚಿಸಲಾಗಿದೆ. ಯಾತ್ರೆ ಮಾರ್ಗದ ವಿವಿಧೆಡೆ ಭಕ್ತರ ತಪಾಸಣೆಗೆ ಆರೋಗ್ಯ ಇಲಾಖೆ ಸರ್ವ ಪ್ರಯತ್ನ ನಡೆಸುತ್ತಿದೆ. ಇದೇ ವೇಳೆ, ಕೆಲವು ಭಕ್ತರಿಗೆ ಬಿಪಿ (ರಕ್ತದೊತ್ತಡ)ದಂತಹ ಸಮಸ್ಯೆ ಎದುರಾದರೆ ಔಷಧ ನೀಡಿ ನಿಯಂತ್ರಿಸಲಾಗುತ್ತದೆ. ಅಲ್ಲದೇ, ಪ್ರಯಾಣದ ಸಮಯದಲ್ಲಿ ನೀವು ಯಾವುದೇ ರೀತಿಯ ಸಮಸ್ಯೆ ಎದುರಾದರೆ, ಆರೋಗ್ಯ ಸಿಬ್ಬಂದಿಯನ್ನು ಸ್ನೇಹಿತರು. ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ.
ಚಾರ್‌ಧಾಮ್ ಯಾತ್ರೆಯ ಮಾರ್ಗದಲ್ಲಿ ಸಾವನ್ನಪ್ಪಿದ ಎಲ್ಲ ಭಕ್ತರ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಮೃತರಲ್ಲಿ ಹೆಚ್ಚಿನವರ ವಯಸ್ಸು 60 ವರ್ಷಕ್ಕಿಂತ ಅಧಿಕ ಇದೆ. ಬಹತೇಕರು ಸಾವಿಗೆ ಹೃದಯಾಘಾತವೇ ಕಾರಣ ಎಂದು ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉತ್ತರಾಖಂಡ ಸರ್ಕಾರವು ಚಾರ್‌ಧಾಮ್ ಯಾತ್ರೆ ನಿಟ್ಟಿನಲ್ಲಿ 14 ಭಾಷೆಗಳಲ್ಲಿ ಆರೋಗ್ಯ ಸಲಹೆಗಳನ್ನು ನೀಡಿದೆ.
ಇದನ್ನೂ ಓದಿ: ಹೆಲಿಪ್ಯಾಡ್ ಬಿಟ್ಟು 100 ಮೀಟರ್ ದೂರದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ತಪ್ಪಿದ ಭಾರಿ ಅನಾಹುತ