ಅಮರಾವತಿ (ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ಹೆಚ್ಚಿನ ಕಾವು ಪಡೆಯುತ್ತಿದೆ. ಇದರ ಜೊತೆಗೆ ರಾಜಕೀಯ ಹಿಂಸಾಚಾರವೂ ಭುಗಿಲೆದ್ದಿದೆ. ಒಂದೇ ದಿನ ಪ್ರತಿಪಕ್ಷವಾದ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಇಬ್ಬರು ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ. ಈ ಹತ್ಯೆಗಳ ಬಗ್ಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕಳವಳ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಮತ್ತು ಶಾಂತಿ, ಭದ್ರತೆಯ ಬಗ್ಗೆ ತಕ್ಷಣ ಗಮನಹರಿಸುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.
ಆಂಧ್ರಪ್ರದೇಶದ ಚಿಲಕಲೂರಿಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮೇ 17ರಂದು ನಡೆದ ಟಿಡಿಪಿ-ಬಿಜೆಪಿ-ಜನಸೇನಾ ಮೈತ್ರಿಕೂಟದ ಸಭೆ ನಡೆದಿತ್ತು. ಈ ಸಭೆಯಲ್ಲಿ ಭಾಗವಹಿಸಿದ ಕಾರಣಕ್ಕೆ ಟಿಡಿಪಿ ಮುಖಂಡ ಮುಳಯ್ಯ ಮತ್ತು ಪಕ್ಷದ ಕಾರ್ಯಕರ್ತ ಇಮಾಮ್ ಹುಸೇನ್ ಮೇಲೆ ದಾಳಿ ಮಾಡಿ ಹತ್ಯೆ ಮಾಡಲಾಗಿದೆ. ಪ್ರತ್ಯೇಕ ಸ್ಥಳದಲ್ಲಿ ಇಬ್ಬರ ಮೇಲೂ ಸೋಮವಾರ ದಾಳಿ ನಡೆಸಲಾಗಿದ್ದು, ಇಬ್ಬರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾರೆ. ಈ ದಾಳಿಗಳನ್ನು ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹತ್ಯೆಗೀಡಾದ ಮುಳಯ್ಯ, ಗಿಡ್ಡಲೂರು ಕ್ಷೇತ್ರದ ಗಡಿಕೋಟದ ನಿವಾಸಿಯಾಗಿದ್ದ. ಮತ್ತೊಂದೆಡೆ, 21 ವರ್ಷದ ಇಮಾಮ್ ಹುಸೇನ್ ನಂದ್ಯಾಲ ನಿವಾಸಿಯಾಗಿದ್ದ. ಇಬ್ಬರೂ ಸಹ ಟಿಡಿಪಿ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದ ಮುಳಯ್ಯ ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಇಮಾಮ್ ಹುಸೇನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಮಾಚಾರ್ನಲ್ಲಿ ಟಿಡಿಪಿ ಕಾರ್ಯಕರ್ತ ಸುರೇಶ್ ಎಂಬುವರ ಕಾರಿಗೆ ಬೆಂಕಿ ಹಚ್ಚಲಾಗಿದೆ. ಈ ಘಟನೆಗಳನ್ನು ಚಂದ್ರಬಾಬು ನಾಯ್ಡು ತೀವ್ರವಾಗಿ ಖಂಡಿಸಿದ್ದಾರೆ.
ಸಂತ್ರಸ್ತ ಕುಟುಂಬಗಳ ಬೆಂಬಲಕ್ಕೆ ಟಿಡಿಪಿ ನಿಲ್ಲಲಿದೆ. ಈ ಮೂರು ಘಟನೆಗಳ ಬಗ್ಗೆ ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸಬೇಕು. ಈ ದುಷ್ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಚುನಾವಣೆಗೆ ಮುನ್ನ ಹೆಚ್ಚುತ್ತಿರುವ ರಾಜಕೀಯ ಹಿಂಸಾಚಾರ ಮತ್ತು ಶಾಂತಿ ಮತ್ತು ಭದ್ರತಾ ಪರಿಸ್ಥಿತಿಯನ್ನು ಚುನಾವಣಾ ಆಯೋಗವು ಪರಿಶೀಲಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚಂದ್ರಬಾಬು ಆಗ್ರಹಿಸಿದ್ದಾರೆ.
ಇದೇ ವೇಳೆ, ಪ್ರಕಾಶಂ ಎಸ್‌ಪಿ ಪರಮೇಶ್ವರ ರೆಡ್ಡಿ, ನಂದ್ಯಾಲ ಎಸ್‌ಪಿ ರಘುವೀರ್‌ರೆಡ್ಡಿ ಮತ್ತು ಪಲ್ನಾಡು ಎಸ್‌ಪಿ ರವಿಶಂಕರ್ ರೆಡ್ಡಿ ಅವರು ವೈಎಸ್‌ಆರ್‌ಸಿಪಿ ಪರವಾಗಿ ಹೆಚ್ಚು ಒಲವು ಹೊಂದಿದ್ದಾರೆ. ಈ ಮೂವರು ಎಸ್ಪಿಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ವೈಎಸ್‌ಆರ್‌ಸಿಪಿ ನಾಯಕರು ತಮ್ಮ ಗೂಂಡಾ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತಿದ್ದಾರೆ. ಇನ್ನು 50 ದಿನಗಳಲ್ಲಿ ಕುರ್ಚಿಯಿಂದ ಕೆಳಗಿಳಿದು ಮನೆಗೆ ಹೋಗಲಿರುವ ಸಿಎಂ ಜಗನ್ ಹಿಂಸಾಚಾರದ ರಾಜಕಾರಣ ಪ್ರೋತ್ಸಾಹಿಸುತ್ತಿದ್ದಾರೆ. ಸೋಲಿನ ಭಯದಿಂದ ತೀವ್ರ ಹತಾಶೆಯಲ್ಲಿರುವ ವೈಎಸ್‌ಆರ್‌ಸಿಪಿ ನಾಯಕರು ತೆಲುಗು ದೇಶಂ ಕಾರ್ಯಕರ್ತರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ನಾಯ್ಡು ಕಿಡಿಕಾರಿದ್ದಾರೆ.
ಇದನ್ನೂ ಓದಿ: ನೇಮಕವಾದ 24 ಗಂಟೆಯಲ್ಲೇ ಪಶ್ಚಿಮ ಬಂಗಾಳ ಡಿಜಿಪಿ ಬದಲಾಯಿಸಿದ ಚುನಾವಣಾ ಆಯೋಗ