ನವದೆಹಲಿ: ಮಣಿಪುರದಲ್ಲಿ ಮತ್ತೆ ಸಂಘರ್ಷ ಭುಗಿಲೆದ್ದಿದೆ. ಪರಿಸ್ಥಿತಿ ನಿಯಂತ್ರಿಸಲು ಕೇಂದ್ರ ಸರ್ಕಾರ 2,000 ಸಿಬ್ಬಂದಿ ಹೊಂದಿರುವ ಹೆಚ್ಚುವರಿ 20 ಸಿಎಪಿಎಫ್ ತಂಡಗಳನ್ನು ರವಾನಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಣಿಪುರದಲ್ಲಿ ಸೋಮವಾರ ಕೇಂದ್ರ ಮೀಸಲು ಪೊಲೀಸ್ ಪಡೆಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 10 ಶಂಕಿತ ಉಗ್ರರು ಸಾವನ್ನಪ್ಪಿದ್ದಾರೆ. ಶಸ್ತ್ರಸಜ್ಜಿತ ಬಂಡುಕೋರರು ಬೊರೊಬೆಕ್ರಾ ಪೊಲೀಸ್ ಠಾಣೆ ಮತ್ತು ಪಕ್ಕದ ಜಿರೀಬಾಮ್ ಜಿಲ್ಲೆಯ ಜಕುರಾಧೋ ಮೈತೇಯಿ ಸಮುದಾಯಕ್ಕೆ ಸೇರಿದ ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚುತ್ತಿದ್ದರು. ಇದನ್ನು ತಡೆಯಲು ಬಂದ ಸಿಆರ್‌ಪಿಎಫ್ ಯೋಧರ ಮೇಲೆ ಗುಂಡಿನ ದಾಳಿಗೆ ಮುಂದಾಗಿದ್ದರು. ಸಿಆರ್‌ಪಿಎಫ್ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಈ ಸಂಘರ್ಷದಲ್ಲಿ ಭಾರೀ ಪ್ರಮಾಣದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಮಣಿಪುರಕ್ಕೆ ನಿಯೋಜನೆಗೊಂಡಿರುವ ಹೊಸ 20 ಕೇಂದ್ರ ಶಸಾಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಯಲ್ಲಿ 15 ಸಿಆರ್‌ಪಿಎಫ್ ತಂಡಗಳಿದ್ದು, ಐದು ಗಡಿ ಭದ್ರತಾ ಪಡೆ (ಬಿಎಸ್ಎಫ್)ಗಳಿವೆ.
ಈ ಘಟಕಗಳು ಈಗಾಗಲೇ ರಾಜ್ಯದಲ್ಲಿರುವ 198 ಸಿಎಪಿಎಫ್ ತುಕಡಿಗಳಿಗೆ ಹೆಚ್ಚುವರಿಯಾಗಿ ಸೇರಲಿವೆ. ಕಳೆದ ಮೇನಲ್ಲಿ ರಾಜ್ಯದಲ್ಲಿ ಉಂಟಾದ ಎರಡು ಸಮುದಾಯಗಳ ಜನಾಂಗೀಯ ಹಿಂಸಾಚಾರದಲ್ಲಿ 200 ಮಂದಿ ಸಾವನ್ನಪ್ಪಿದ್ದರು. ಅಂದಿನಿಂದ ಸಶಸ್ತ್ರ ತುಕಡಿಗಳು ಭದ್ರತೆಯ ಜವಾಬ್ದಾರಿ ನಿರ್ವಹಿಸುತ್ತಿವೆ.
ನವೆಂಬರ್ 30ರವರೆಗೆ ಈ ಎಲ್ಲಾ ಸಿಎಪಿಎಫ್ ಘಟಕಗಳು ಕಾರ್ಯನಿರ್ವಹಿಸಲಿವೆ ಎಂದು ಕೇಂದ್ರ ಗೃಹ ಸಚಿವಾಲಯ ಹಿಂದೆ ತಿಳಿಸಿತ್ತು. ಆದರೆ, ಇದೀಗ ಮತ್ತೆ ಸಂಘರ್ಷ ಆರಂಭವಾಗಿದ್ದು ಮತ್ತಷ್ಟು ದಿನಗಳ ಕಾಲ ಸೇನಾಪಡೆಗಳ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
2023ರ ಮೇ 3ರಂದು ಈ ಸಮುದಾಯಗಳ ನಡುವೆ ಗಲಾಟೆ ಶುರುವಾಗಿದ್ದು, ಬಳಿಕ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆಗಿನಿಂದ ಒಂದಿಲ್ಲೊಂದು ಗಲಭೆ, ಸಾವು-ನೋವುಗಳು ಸಂಭವಿಸುತ್ತಲೇ ಇವೆ.
ಇದನ್ನೂ ಓದಿ: 96 ಎನ್ಕೌಂಟರ್ಗಳಲ್ಲಿ 180 ನಕ್ಸಲರು ಹತ: 229 ಶಸ್ತ್ರಾಸ್ತ್ರಗಳು ಭದ್ರತಾ ಪಡೆಗಳ ವಶ