ನವದೆಹಲಿ: 370ನೇ ವಿಧಿ, ಚುನಾವಣಾ ಬಾಂಡ್ ಯೋಜನೆ ರದ್ದು ಸೇರಿದಂತೆ ಹಲವು ಮಹತ್ವದ ತೀರ್ಪುಗಳ ಭಾಗವಾಗಿದ್ದ ಹಿರಿಯ ನ್ಯಾಯಾಧೀಶ ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕವಾಗಿದ್ದಾರೆ. ಖನ್ನಾ ಅವರು ನವೆಂಬರ್ 11ರಂದು ಮುಂದಿನ ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಹಾಲಿ ಸಿಜೆಐ ಆಗಿರುವ ಡಿ.ವೈ.ಚಂದ್ರಚೂಡ್ ಅವರು ನವೆಂಬರ್ 10ರಂದು ನಿವೃತ್ತರಾಗಲಿದ್ದಾರೆ. ನ್ಯಾ.ಖನ್ನಾ ಅವರನ್ನು ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಅಕ್ಟೋಬರ್ 17ರಂದು ಅವರು ಶಿಫಾರಸು ಮಾಡಿದ್ದರು. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರ ಖನ್ನಾ ಅವರನ್ನು ಸಿಜೆಐ ಆಗಿ ನೇಮಿಸಿದೆ. ಅವರು ಆರು ತಿಂಗಳ ಕಾಲ ನ್ಯಾಯಾಂಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲಿದ್ದಾರೆ. ಮೇ 13, 2025ರವರೆಗೆ ಅಧಿಕಾರವಧಿ ಇರಲಿದೆ.
In exercise of the power conferred by the Constitution of India, Hon’ble President, after consultation with Hon’ble Chief Justice of India, is pleased to appoint Shri Justice Sanjiv Khanna, Judge of the Supreme Court of India as Chief Justice of India with effect from 11th…
— Arjun Ram Meghwal (@arjunrammeghwal) October 24, 2024
ಖನ್ನಾ ಕಾನೂನು ಹಾದಿ: 1960ರ ಮೇ 14ರಂದು ಜನಿಸಿರುವ ಸಂಜೀವ್ ಖನ್ನಾ ಅವರು ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. 2005ರಲ್ಲಿ ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಪದೋನ್ನತಿ ಪಡೆದಿದ್ದರು. 2006ರಲ್ಲಿ ಕಾಯಂ ನ್ಯಾಯಾಧೀಶರಾಗಿ ನೇಮಕವಾದರು. 2019ರ ಜನವರಿ 18ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಬಡ್ತಿ ಪಡೆದರು.
ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ಖನ್ನಾ ಹಲವಾರು ಮಹತ್ವದ ಪ್ರಕರಣಗಳ ತೀರ್ಪಿನ ಭಾಗವಾಗಿದ್ದಾರೆ. ರಾಜಕೀಯ ಪಕ್ಷಗಳು ನಿಧಿ ಸಂಗ್ರಹಣೆಗಾಗಿ ರೂಪಿಸಲಾಗಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿದ ಐವರು ನ್ಯಾಯಾಧೀಶರ ಪೀಠದಲ್ಲಿ ಇವರೂ ಒಬ್ಬರು.
ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ 2019ರ ನಿರ್ಧಾರವನ್ನು ಎತ್ತಿಹಿಡಿದ ಪಂಚಪೀಠದಲ್ಲಿ ಒಬ್ಬ ನ್ಯಾಯಾಧೀಶರಾಗಿದ್ದರು.
ಇದಲ್ಲದೇ, ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ ವಿರುದ್ಧ ಕೇಳಿಬಂದ ಆರೋಪದಲ್ಲಿ ಸಾಧನಗಳು ಸುರಕ್ಷಿತವಾಗಿವೆ, ನಕಲಿ ಮತದಾನ ಸಾಧ್ಯವಿಲ್ಲ ಎಂಬ ಮಹತ್ವದ ಆದೇಶ ನೀಡಿದ್ದರು. ದೆಹಲಿ ಅಬಕಾರಿ ನೀತಿಯಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರಿಗೆ ಮಧ್ಯಂತರ ಜಾಮೀನು ಮಂಜೂರು ಸೇರಿದಂತೆ ಹಲವು ಹಗರಣ ಪ್ರಕರಣಗಳ ವಿಚಾರಣೆ ನಡೆಸಿದ್ದರು.
ಖನ್ನಾ ಅವರು, ದೇಶದ ಗಮನ ಸೆಳೆದಿದ್ದ 1973ರ ಐತಿಹಾಸಿಕ ಕೇಶವಾನಂದ ಭಾರತಿ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಎಚ್.ಆರ್.ಖನ್ನಾ ಅವರ ಸೋದರಳಿಯ.
ಇದನ್ನೂ ಓದಿ: ಸಿಜೆಐ ಚಂದ್ರಚೂಡ್ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಖನ್ನಾ ಹೆಸರು ಪ್ರಸ್ತಾಪ