ನವದೆಹಲಿ: ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಪಕ್ಷಗಳು ಬೇಡಿಕೆ ಇಟ್ಟಿರುವ ಹಳೆಯ ಪಿಂಚಣಿ ಮತ್ತು ಹೊಸ ಪಿಂಚಣಿ ಬದಲಾಗಿ ಏಕೀಕೃತ ಪಿಂಚಣಿ ಯೋಜನೆ ಜಾರಿ ಮಾಡಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಅನುಮೋದನೆ ಪಡೆಯಲಾಗಿದೆ.
ಸರ್ಕಾರಿ ನೌಕರರಿಗೆ ಮೂರು ಬಗೆಯ ಪಿಂಚಣಿ ಲಾಭಗಳನ್ನು ಇದು ಒದಗಿಸಲಿದೆ. ಏಕೀಕೃತ ಪಿಂಚಣಿ ಯೋಜನೆಯು 2025 ರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಜಾರಿ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮೂರು ಹಂತದ ಪಿಂಚಣಿ ಖಚಿತ: ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ಸರ್ಕಾರ ನೌಕರರಿಗೆ ಖಚಿತ ಪಿಂಚಣಿ ಒದಗಿಸುವ ಯುಪಿಎಸ್ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರ ಮೊದಲ ಕ್ರಮವೆಂದರೆ, ಶೇಕಡಾ 50 ರಷ್ಟು ಪಿಂಚಣಿ ನೀಡುವುದಾಗಿದೆ. ಅಂದರೆ, ನೌಕರನು ತಾನು 25 ವರ್ಷ ಕೆಲಸದ ಬಳಿಕ ನಿವೃತ್ತಿಯಾದಲ್ಲಿ ಆತನಿಗೆ ತನ್ನ ಕೊನೆಯ 12 ತಿಂಗಳ ಅವಧಿಯಲ್ಲಿ ಪಡೆದ ಸಂಬಳದ ಅರ್ಧದಷ್ಟು ಹಣವನ್ನು ಪಿಂಚಣಿಯಾಗಿ ನೀಡಲಾಗುತ್ತದೆ ಎಂದರು.
ಹಾಗೊಂದು ವೇಳೆ ನೌಕರ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಬರುತ್ತಿದ್ದ ಪಿಂಚಣಿಯಲ್ಲಿ ಶೇಕಡಾ 60 ರಷ್ಟು ಲಭ್ಯವಾಗಲಿದೆ. ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಸರ್ಕಾರ ನೌಕರರಿಗೆ ನಿವೃತ್ತಿ ನಂತರ ಮಾಸಿಕ 10 ಸಾವಿರ ರೂಪಾಯಿ ಪಿಂಚಣಿ ನೀಡುವುದಾಗಿದೆ. ಅಂದರೆ, ಇದು ಖಚಿತ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಕನಿಷ್ಠ ಪಿಂಚಣಿಯನ್ನು ನೀಡುವುದಾಗಿದೆ ಎಂದು ವಿವರಿಸಿದರು.
ಪಿಂಚಣಿ ಆಯ್ಕೆ ಕಡ್ಡಾಯವಲ್ಲ: ಯುಪಿಎಸ್ ಆಯ್ಕೆಯು ಕೇಂದ್ರ ಸರ್ಕಾರಿ ನೌಕರರಿಗೆ ಕಡ್ಡಾಯವಲ್ಲ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್) ಮತ್ತು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ನಡುವೆ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ ಎಂದು ವೈಷ್ಣವ್ ಅವರು ತಿಳಿಸಿದರು.
ಸದ್ಯ ಈಗಿರುವ ಪಿಂಚಣಿ ಯೋಜನೆಯು ಉದ್ಯೋಗಿಗಳ ವೇತನದಲ್ಲಿ ಶೇಕಡಾ 10 ರಷ್ಟು ಭಾಗವನ್ನು ಪಿಎಫ್ ಆಗಿ ಕಟ್ ಆಗಲಿದೆ. ಅದಕ್ಕೆ ಸರ್ಕಾರ ಶೇಕಡಾ 14 ರಷ್ಟು ಪಾಲು ನೀಡುತ್ತದೆ. ಈ ಏಕೀಕೃತ ಪಿಂಚಣಿ ಯೋಜನೆಯಡಿ ಶೇಕಡಾ 18 ರಷ್ಟು ಸರ್ಕಾರ ನೀಡಲಿದೆ.
ಇದನ್ನೂ ಓದಿ: 2026 ರ ವೇಳೆಗೆ ನಕ್ಸಲ್ವಾದಕ್ಕೆ ತಿಲಾಂಜಲಿ, ಕಾಶ್ಮೀರದಲ್ಲಿ ಏಕಾಂಗಿ ಹೋರಾಟ: ಅಮಿತ್ ಶಾ - Amit Shah on extremism