ನವದೆಹಲಿ : ಸುಪ್ರೀಂ ಕೋರ್ಟ್ ಕೊಲಿಜಿಯಂನ ಶಿಫಾರಸನ್ನು ತ್ವರಿತವಾಗಿ ಅಂಗೀಕರಿಸಿರುವ ಕೇಂದ್ರ ಸರ್ಕಾರ ಮಂಗಳವಾರ ನ್ಯಾಯಮೂರ್ತಿಗಳಾದ ಎನ್ ಕೋಟಿಶ್ವರ್ ಸಿಂಗ್ ಮತ್ತು ಆರ್ ಮಹಾದೇವನ್ ಅವರನ್ನು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಅನುಮೋದನೆ ನೀಡಿದೆ.
In exercise of the powers conferred by the Constitution of India, Hon’ble President, after consultation with Hon’ble Chief Justice of India, is pleased to appoint the following as
— Arjun Ram Meghwal (@arjunrammeghwal) July 16, 2024
Supreme Court Judges:- pic.twitter.com/OWQ9iGIooG
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, "ಭಾರತದ ಸಂವಿಧಾನವು ನೀಡಿರುವ ಅಧಿಕಾರವನ್ನು ಚಲಾಯಿಸಿ, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರೊಂದಿಗೆ ಸಮಾಲೋಚಿಸಿದ ನಂತರ ಇಬ್ಬರು ನ್ಯಾಯಾಧೀಶರನ್ನು ನೇಮಕ ಮಾಡಲು ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ" ಎಂದು ಹೇಳಿದ್ದಾರೆ.
ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಜುಲೈ 11 ರಂದು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್. ಕೋಟಿಶ್ವರ್ ಸಿಂಗ್ ಮತ್ತು ಮದ್ರಾಸ್ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನು ಸುಪ್ರೀಂ ಕೋರ್ಟ್ಗೆ ಬಡ್ತಿ ನೀಡಲು ಶಿಫಾರಸು ಮಾಡಿದ ಐದು ದಿನಗಳಲ್ಲಿ ಕೇಂದ್ರ ಸರ್ಕಾರ ಈ ಹೆಸರುಗಳಿಗೆ ಒಪ್ಪಿಗೆ ನೀಡಿದೆ.
ನ್ಯಾಯಮೂರ್ತಿಗಳಾದ ಸಿಂಗ್ ಮತ್ತು ಮಹಾದೇವನ್ ಅವರ ಪ್ರಮಾಣ ವಚನದ ನಂತರ, ಸುಪ್ರೀಂ ಕೋರ್ಟ್ 34 ನ್ಯಾಯಾಧೀಶರ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲಿದೆ.
ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸುಪ್ರೀಂ ಕೋರ್ಟ್ಗೆ ನ್ಯಾಯಮೂರ್ತಿಗಳ ನೇಮಕಾತಿಯ ಶಿಫಾರಸುಗಳ ಸಂದರ್ಭದಲ್ಲಿ ಹಿರಿತನ, ಅರ್ಹತೆ, ಸಮಗ್ರತೆ, ಪ್ರದೇಶ, ಲಿಂಗ ಮತ್ತು ಸಮುದಾಯದ ವೈವಿಧ್ಯತೆ ಮತ್ತು ಸಮಾಜದ ಅಂಚಿನಲ್ಲಿರುವ ಮತ್ತು ಹಿಂದುಳಿದ ವರ್ಗಗಳ ಸೇರ್ಪಡೆ ಮುಂತಾದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಕೊಲಿಜಿಯಂ ಹೇಳಿದೆ.
ಮಣಿಪುರದವರಾದ ನ್ಯಾಯಮೂರ್ತಿ ಕೋಟಿಶ್ವರ್ ಸಿಂಗ್ ಅವರನ್ನು 2011ರ ಅಕ್ಟೋಬರ್ನಲ್ಲಿ ಗುವಾಹಟಿ ಹೈಕೋರ್ಟ್ನ ನ್ಯಾಯಾಧೀಶರನ್ನಾಗಿ ನೇಮಿಸಲಾಗಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ಅವರನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು.
ನ್ಯಾಯಮೂರ್ತಿ ಆರ್ ಮಹಾದೇವನ್ ಪ್ರಸ್ತುತ ಮದ್ರಾಸ್ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ ಮತ್ತು ಮದ್ರಾಸ್ ಹೈಕೋರ್ಟ್ನಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಾಧೀಶರ ಹಿರಿತನದ ಶ್ರೇಣಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಹಿಂದುಳಿದ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಸಲುವಾಗಿ ನ್ಯಾಯಮೂರ್ತಿ ಮಹಾದೇವನ್ ಅವರಿಗೆ ಆದ್ಯತೆ ನೀಡಲಾಗಿದೆ ಎಂದು ಕೊಲಿಜಿಯಂ ಹೇಳಿದೆ.
ಇದನ್ನೂ ಓದಿ : ಅಧಾರ್ಮಿಕ ಚಟುವಟಿಕೆ ಆರೋಪ: 13 ಮಹಾಮಂಡಲೇಶ್ವರರು, ಸಂತರನ್ನು ಹೊರಹಾಕಿದ ಅಖಾಡಾ ಪರಿಷತ್ - AKHARA PARISHAD