ಹೈದರಾಬಾದ್: ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಅವರು ಇಂದು ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಶನಿವಾರ ಬೆಳಗಿನ ಜಾವ 4.50ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಮೆಗಾಸ್ಟಾರ್ ಚಿರಂಜೀವಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ತಮ್ಮ ಎಕ್ಸ್ ಖಾತೆಯಿಂದ ಟ್ವೀಟ್ ಮಾಡಿರುವ ಮೇಗಾಸ್ಟಾರ್ ಚಿರಂಜೀವಿ, ರಾಮೋಜಿ ರಾವ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ತೆಲುಗಿನಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. "ಯಾರಿಗೂ ತಲೆಬಾಗದ ಮೇರು ಪರ್ವತ; ಈ ಸುದ್ದಿಯಿಂದ ತೀವ್ರ ದುಃಖವಾಗಿದೆ. ಓಂ ಶಾಂತಿ" ಎಂದು ಅವರು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ರಾಮೋಜಿ ರಾವ್ ನಿರ್ಮಾಣದ ನಿನ್ನು ಚೂಡಾಲಾನಿ ಚಿತ್ರದ ಮೂಲಕ ನಾಯಕ ನಟನಾಗಿ ತಮ್ಮ ನಟನಾ ಪಯಣ ಆರಂಭಿಸಿದ RRR ಸ್ಟಾರ್ ಜೂನಿಯರ್ NTR, ದಾರ್ಶನಿಕನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
‘‘ರಾಮೋಜಿ ರಾವ್ ಅವರಂತಹ ದಾರ್ಶನಿಕರು ಕೋಟಿಯಲ್ಲಿ ಒಬ್ಬರು. ಮಾಧ್ಯಮ ಉದ್ಯಮಿ ಮತ್ತು ಭಾರತೀಯ ಚಿತ್ರರಂಗದ ದಿಗ್ಗಜ, ಅವರ ಅನುಪಸ್ಥಿತಿಯನ್ನು ಸರಿಪಡಿಸಲಾಗದು. ಅವರು ಈಗ ನಮ್ಮೊಂದಿಗಿಲ್ಲ ಎಂಬ ಸುದ್ದಿ ಬಹಳ ದುಃಖ ತಂದಿದೆ.
'ನಿನ್ನು ಚೂಡಾಲನಿ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದ ನೆನಪುಗಳನ್ನು ಎಂದಿಗೂ ಮರೆಯುವುದಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪ ತಿಳಿಸುತ್ತೇನೆ
ನಟಿ ಖುಷ್ಬೂ ಕೂಡ ರಾಮೋಜಿ ರಾವ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಉದ್ಯಮದ ನಷ್ಟಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಪ್ರಧಾನಿ ಮೋದಿ ಅವರಿಂದಲೂ ಸಂತಾಪ: ರಾಮೋಜಿ ರಾವ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಮಾಧ್ಯಮ ಲೋಕವನ್ನು ಪರಿವರ್ತಿಸಿದ ದಾರ್ಶನಿಕ ಎಂದು ಶ್ಲಾಘಿಸಿದ್ದಾರೆ. ಪತ್ರಿಕೋದ್ಯಮ ಮತ್ತು ಚಲನಚಿತ್ರೋದ್ಯಮಕ್ಕೆ ರಾವ್ ಅವರು ನೀಡಿರುವ ಮಹತ್ವದ ಕೊಡುಗೆಗಳನ್ನು ಮೋದಿ ಶ್ಲಾಘಿಸಿದ್ದಾರೆ, ನಾವೀನ್ಯತೆ ಮತ್ತು ಶ್ರೇಷ್ಠತೆಯಲ್ಲಿ ಹೊಸ ಮಾನದಂಡಗಳನ್ನು ಅವರು ಸೃಷ್ಟಿಸಿದ್ದಾರೆ ಎಂದು ಅವರು ಸ್ಮರಿಸಿದ್ದಾರೆ.
ರಾಹುಲ್ ಗಾಂಧಿ ಸಂತಾಪ: ''ಪದ್ಮವಿಭೂಷಣ, ಭಾರತೀಯ ಮಾಧ್ಯಮ ಉದ್ಯಮದ ಪ್ರವರ್ತಕರಾದ ಶ್ರೀ ರಾಮೋಜಿ ರಾವ್ ಗಾರು ಅವರ ನಿಧನಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಪತ್ರಿಕೋದ್ಯಮ, ಸಿನಿಮಾ ಮತ್ತು ಮನರಂಜನೆಗೆ ಅವರ ಕೊಡುಗೆಗಳು ಶಾಶ್ವತ ಪ್ರಭಾವ ಬೀರಿದ್ದು, ಮಾಧ್ಯಮರಂಗವನ್ನು ಪರಿವರ್ತನೆ ಮಾಡಿವೆ. ಈ ದುಃಖದ ಸಂದರ್ಭದಲ್ಲಿ ನಾನೂ ಕೂಡ ಅವರ ಕುಟುಂಬ, ಸ್ನೇಹಿತರು ಮತ್ತು ಅನುಯಾಯಿಗಳೊಂದಿಗೆ ಭಾಗಿಯಾಗಿದ್ದೇನೆ'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನು ಓದಿ: ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಮೋಜಿ ರಾವ್ ನಿಧನ - ramoji rao passed away