ನವದೆಹಲಿ: ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುವ ಇಲ್ಲಿನ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಭಾರೀ ಭ್ರಷ್ಟಾಚಾರ ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಸೇರಿ 9 ಮಂದಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬುಧವಾರ ಬಂಧಿಸಿದೆ.
ಸಮಸ್ಯೆ ಎಂದು ಹೇಳಿಕೊಂಡು ಬರುವ ರೋಗಿಗಳಿಂದಲೇ ವೈದ್ಯರು ಹಣ ಪೀಕುತ್ತಿದ್ದರು. ಇದರ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದ ಸಿಬಿಐ ಈಗ ಇಬ್ಬರು ವೈದ್ಯರನ್ನು ಬಂಧಿಸುವ ಮೂಲಕ ಪ್ರಕರಣವನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಆರ್ಎಂಎಲ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ.ಪರ್ವತ್ ಗೌಡ ಮತ್ತು ವೈದ್ಯ ಅಜಯ್ ರಾಜ್ ಬಂಧಿತರು. ಇವರಿಬ್ಬರೂ ರೋಗಿಗಳಿಂದ ಬಹಿರಂಗವಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ತನಿಖಾ ಸಂಸ್ಥೆಗೆ ಸಾಕ್ಷ್ಯ ದೊರಕಿದೆ. ಆಸ್ಪತ್ರೆಗೆ ಅಗತ್ಯ ಉಪಕರಣಗಳನ್ನು ಪೂರೈಸುವ ಕಂಪನಿಗಳ ಪ್ರತಿನಿಧಿಗಳ ಮೂಲಕ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರೋಗಿಗಳಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮೇ 7 ರಂದು ಎಫ್‌ಐಆರ್ ದಾಖಲಿಸಿದೆ. ನಾಗ್ಪಾಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮಾಲೀಕ ನರೇಶ್ ನಾಗ್ಪಾಲ್ ಈ ಆಸ್ಪತ್ರೆಗೆ ಉಪಕರಣಗಳನ್ನು ಸರಬರಾಜು ಮಾಡುತ್ತಿದ್ದಾರೆ. ಅವರ ಕಂಪನಿಯಿಂದ ಉಪಕರಣ ಖರೀದಿಗೆ ವೈದ್ಯರು ಮತ್ತು ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.
ಕಳೆದ ತಿಂಗಳ ಹಿಂದೆ ಕೇಳಿದ ಲಂಚದ ಬಾಕಿಯನ್ನು ನೀಡುವುದಾಗಿ ನಾಗ್ಪಾಲ್ ಅವರು ಭರವಸೆ ನೀಡಿದ್ದರು. ಈ ವೇಳೆ ಲಂಚದ ಮೊತ್ತವನ್ನು ಮೇ 7ರಂದು ಆರ್ಎಂಎಲ್ ಆಸ್ಪತ್ರೆಗೆ ತಲುಪಿಸುವುದಾಗಿ ತಿಳಿಸಿದ್ದರು. ಈ ವೇಳೆ, ದಾಳಿ ಮಾಡಿದ ಸಿಬಿಐ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದೆ.
ಬಂಧನಕ್ಕೊಳಗಾದ ಆರೋಪಿಗಳು: ಡಾ.ಪರ್ವತ್ ಗೌಡ, ವೈದ್ಯ ಅಜಯ್ ರಾಜ್, ಆಸ್ಪತ್ರೆಯ ಹಿರಿಯ ತಾಂತ್ರಿಕ ಉಸ್ತುವಾರಿ ರಜನೀಶ್ ಕುಮಾರ್, ಗುಮಾಸ್ತ ಭುವಲ್ ಜೈಸ್ವಾಲ್, ಸಂಜಯ್ ಕುಮಾರ್, ನರ್ಸ್ ಶಾಲು ಶರ್ಮಾ, ನಾಗ್ಪಾಲ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಮಾಲೀಕ ನರೇಶ್ ನಾಗ್ಪಾಲ್, ಎಂ.ಭಾರತಿ ಮೆಡಿಕಲ್ ಟೆಕ್ನಾಲಜಿಯ ಭರತ್ ಸಿಂಗ್ ದಲಾಲ್ , M/s ಸಿಗ್ನೇಮ್ಡ್ ಪ್ರೈವೈಟ್ ಲಿಮಿಟೆಡ್ನ ನಿರ್ದೇಶಕರಾದ ಅಬ್ರಾರ್ ಅಹ್ಮದ್, M/s ಬಯೋಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ನ ಏರಿಯಾ ಸೇಲ್ಸ್ ಮ್ಯಾನೇಜರ್ ಆಕರ್ಷ್ ಗುಲಾಟಿ, ಬಯೋಟ್ರಾನಿಕ್ಸ್ ಉದ್ಯೋಗಿ ಮೋನಿಕಾ ಸಿನ್ಹಾ.