ಪುಣೆ (ಮಹಾರಾಷ್ಟ್ರ): ವಿವಾದಿತ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಶಾಕ್ ನೀಡಿದೆ. ಲೋಕಸೇವಾ ಆಯೋಗ ಪೂಜಾ ಖೇಡ್ಕರ್ ವಿರುದ್ಧ ಪ್ರಕರಣ ದಾಖಲಿಸಿದೆ. ಪೂಜಾ ಖೇಡ್ಕರ್ ಅವರಿಗೆ ಆಯೋಗ ಶೋಕಾಸ್ ನೋಟಿಸ್ ನೀಡಿದೆ. ಲೋಕಸೇವಾ ಆಯೋಗ ನೋಟಿಸ್ ಜಾರಿ ಮಾಡಿದ ಬಳಿಕ ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಸಮಸ್ಯೆಗಳು ಹೆಚ್ಚುತ್ತಲೇ ಇವೆ.
ಉಮೇದುವಾರಿಕೆ ರದ್ದತಿಗೆ ಕಾರಣವನ್ನು ತೋರಿಸಿ: 2022 ರ ನಾಗರಿಕ ಸೇವಾ ಪರೀಕ್ಷೆಗೆ ತಾತ್ಕಾಲಿಕವಾಗಿ ಶಿಫಾರಸು ಮಾಡಲಾದ ಅಭ್ಯರ್ಥಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ದುಷ್ಕೃತ್ಯದ ಬಗ್ಗೆ ಕೇಂದ್ರ ಲೋಕಸೇವಾ ಆಯೋಗವು (UPSC) ವಿವರವಾದ ಮತ್ತು ಸಂಪೂರ್ಣ ತನಿಖೆ ನಡೆಸಿದೆ. ಪರೀಕ್ಷಾ ನಿಯಮಗಳ ಪ್ರಕಾರ ಅನುಮತಿ ಮಿತಿ ಮೀರಿ ಹೆಸರು, ತಂದೆ ಮತ್ತು ತಾಯಿಯ ಹೆಸರು, ಭಾವಚಿತ್ರ ಮತ್ತು ಸಹಿ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಬದಲಾಯಿಸಿಕೊಂಡು ವಂಚನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ವಂಚನೆ ಹಿನ್ನೆಲೆ ಯುಪಿಎಸ್‌ಸಿ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದೆ ಮತ್ತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯೊಂದಿಗೆ ಕ್ರಮವನ್ನು ಪ್ರಾರಂಭಿಸಿದೆ. ಅವರ ಸಿವಿಲ್ ಅಭ್ಯರ್ಥ್ಯತ್ವವನ್ನು ರದ್ದುಗೊಳಿಸಲು ಶೋಕಾಸ್ ನೋಟಿಸ್ (ಎಸ್‌ಸಿಎನ್) ನೀಡಲಾಗಿದೆ. ನಾಗರಿಕ ಸೇವೆಗಳ ಪರೀಕ್ಷೆ-2022 ನಿಯಮಗಳ ಪ್ರಕಾರ, ಮುಂದಿನ ಪರೀಕ್ಷೆಯ ಆಯ್ಕೆಯನ್ನು ನಿಷೇಧಿಸಲು ಪ್ರಸ್ತಾಪಿಸಲಾಗಿದೆ.
ಪೂಜಾ ಖೇಡ್ಕರ್ ಅವರಿಗೆ ಕಳುಹಿಸಲಾದ ನೋಟಿಸ್‌ನಲ್ಲಿ ಕೇಂದ್ರ ಲೋಕಸೇವಾ ಆಯೋಗವು ತನ್ನ ಉದ್ದೇಶವನ್ನು ಸ್ಪಷ್ಟವಾಗಿ ಮಂಡಿಸಿದೆ. ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಆಯೋಗ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಆದ್ದರಿಂದ ಲೋಕಸೇವಾ ಆಯೋಗವು ಈ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಿದೆ.
ಏನಿದು ವಿವಾದ: ತರಬೇತಿಯಲ್ಲಿರುವ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್, ತಮ್ಮ ವೈಯಕ್ತಿಕ ಕಾರಿನ ಮೇಲೆ 'ಮಹಾರಾಷ್ಟ್ರ ಸರ್ಕಾರ' ಎಂದು ಅನಧಿಕೃತವಾಗಿ ಬರೆದುಕೊಂಡಿದ್ದಲ್ಲದೇ, ಕೆಂಪು ದ್ವೀಪವನ್ನು ಅಳವಡಿಸಿಕೊಂಡಿದ್ದರು. ಜೊತೆಗೆ ಅಧಿಕಾರಿಯೊಬ್ಬರ ಕಚೇರಿಯನ್ನು ಅಕ್ರಮವಾಗಿ ತಮ್ಮ ವಶದಲ್ಲಿರಿಸಿಕೊಂಡಿದ್ದರು. ಕಚೇರಿಗೆ ದುಬಾರಿ ವಸ್ತುಗಳನ್ನು ಅಳವಡಿಸಿದ್ದರು.
ಪ್ರೊಬೇಷನರಿ ಅಧಿಕಾರಿಯಾಗಿದ್ದುಕೊಂಡು ಪೂರ್ಣಾವಧಿ ಅಧಿಕಾರ ಚಲಾಯಿಸುತ್ತಿದ್ದ ಪೂಜಾ ಮೇಲೆ ಕ್ರಮ ಜರುಗಿಸಲು ಕೋರಲಾಗಿದೆ. ಅದರಂತೆ, ವಿಚಾರಣೆ ನಡೆಸುತ್ತಿರುವ ಪೊಲೀಸರು, ಕೆಂಪು ದೀಪವನ್ನು ಬಳಸಿದ್ದ ವೈಯಕ್ತಿಕ ಕಾರನ್ನು ಜಪ್ತಿ ಮಾಡಿದ್ದಾರೆ. ಇದರ ಜೊತೆಗೆ, ಐಎಎಸ್ ಅಧಿಕಾರಿಯಾಗಿ ನೇಮಕವಾದ ವೇಳೆ ಕೇಂದ್ರ ಲೋಕಸೇವಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿತ್ತು.
ಕೆಂಪು ದೀಪ ಅಳವಡಿಸಿಕೊಂಡು, ಹಲವು ಬಾರಿ ರಸ್ತೆ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ದಂಡದ ಚಲನ್ಗಳನ್ನು ಕಳುಹಿಸಲಾಗಿದೆ. ಅತಿಯಾದ ವೇಗದ ಚಾಲನೆ, ಸಿಗ್ನಲ್ ಉಲ್ಲಂಘನೆ ಸೇರಿ 21 ಆರೋಪಗಳ ಬಾಕಿ ದಂಡ ಪಾವತಿಸಬೇಕಿದೆ. ಹೀಗಾಗಿ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.