ಕೋಲ್ಕತ್ತಾ(ಪಶ್ಚಿಮ ಬಂಗಾಳ): ಬಂಗಾಳದಲ್ಲಿ ವೈದ್ಯೆ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಕೇಸ್ಗೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿದ್ದು, ವೈದ್ಯರು ಎರಡು ದಿನಗಳಿಂದ ತೀವ್ರ ಹೋರಾಟ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ಕೋಲ್ಕತ್ತಾ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ವಹಿಸಿ ಮಂಗಳವಾರ ಆದೇಶಿಸಿತು.
ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಕೋರಿ ಹಲವು ಅರ್ಜಿಗಳು ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದವು. ಪ್ರಕರಣದ ಸೂಕ್ಷ್ಮತೆ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ, ಕೇಂದ್ರೀಯ ತನಿಖಾ ದಳಕ್ಕೆ ತನಿಖೆಗೆ ಸೂಚಿಸಿದರು. ಇದೇ ವೇಳೆ ರಾಜ್ಯ ಪೊಲೀಸರ ಬಳಿ ಇರುವ ಪ್ರಕರಣದ ಎಲ್ಲ ಮಾಹಿತಿ, ದಾಖಲೆ ಸಿಸಿಟಿವಿ ದೃಶ್ಯಾವಳಿಗಳನ್ನು ಸಿಬಿಐಗೆ ಒಪ್ಪಿಸಬೇಕು ಎಂದು ತಿಳಿಸಿದರು.
ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಸಂಗತಿಗಳು ಬಯಲಿಗೆ ಬಂದಿವೆ. ಮುಂದಿನ ಆದೇಶದವರೆಗೆ ಸಂದೀಪ್ ಘೋಷ್ ಅವರನ್ನು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾಗಿ ಮರುನೇಮಕ ಮಾಡುವಂತಿಲ್ಲ ಎಂದೂ ಹೈಕೋರ್ಟ್ ಸೂಚಿಸಿದೆ.
ಬಂಧಿತ ವ್ಯಕ್ತಿ 'ಪ್ರಭಾವಿ': ವೈದ್ಯೆಯನ್ನು ಅಮಾನುಷವಾಗಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆಯಲ್ಲಿ ಈಗಾಗಲೇ ಬಂಧಿತನಾಗಿರುವ ವ್ಯಕ್ತಿ ಪ್ರಭಾವಿಯಾಗಿದ್ದಾನೆ. ಲಾಲ್‌ಬಜಾರ್‌ನ ಕೈಗಳು ಈ ಘಟನೆಯಲ್ಲಿ ಬೇರೆ ಭಾಗಿಯಾಗಿವೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಶನಿವಾರ ಇಲ್ಲಿನ ಸೀಲ್ದಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ ನ್ಯಾಯಾಧೀಶರು ಆತನನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.
ಸಿಬಿಐ ತನಿಖೆಗೆ ಕೋರಿದ್ದ ಅರ್ಜಿಗಳು: ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಹಲವಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಸಲಾಗಿದೆ. ಮಂಗಳವಾರ ಇವುಗಳನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠವು ವಿಚಾರಣೆ ನಡೆಸಿತು. ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿದ್ದವು.
ಭಾನುವಾರ ಗಡುವು ನೀಡಿದ್ದ ಸಿಎಂ: ಪಶ್ಚಿಮ ಬಂಗಾಳದಲ್ಲಿ ತೀವ್ರ ಸಂಚಲನ ಮೂಡಿಸಿರುವ ಪ್ರಕರಣವನ್ನು ಭೇದಿಸಲು ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಅವರು ರಾಜ್ಯ ಪೊಲೀಸರಿಗೆ ಭಾನುವಾರದ ಗಡುವು ನೀಡಿದ್ದರು. ಆಗಸ್ಟ್ 18ರೊಳಗೆ ಆರೋಪಿಗಳನ್ನು ಪತ್ತೆ ಮಾಡದಿದ್ದಲ್ಲಿ ಸಿಬಿಐ ತನಿಖೆಗೆ ನೀಡಲಾಗುವುದು ಎಂದು ತಿಳಿಸಿದ್ದರು. ಆದರೆ, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿರುವ ಕಾರಣ, ಹೈಕೋರ್ಟ್ ತಾನೇ ಮಧ್ಯಪ್ರವೇಶಿಸಿದೆ.