ನವದೆಹಲಿ: ಮುಂದಿನ ಐದು ವರ್ಷ 4.1 ಕೋಟಿ ಯುವಜನತೆಗೆ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದು, ಇದಕ್ಕಾಗಿ 2 ಲಕ್ಷ ಕೋಟಿ ರೂ ಹಣ ಮೀಸಲಿಡುವುದಾಗಿ ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಇಂದು ಬಜೆಟ್ನಲ್ಲಿ ಪ್ರಕಟಿಸಿದ್ದಾರೆ.
ಉದ್ಯೋಗ ಸೃಷ್ಟಿಸುವ ಜೊತೆಗೆ ಯುವಜನತೆಯನ್ನು ಕೌಶಲ್ಯಯುತರನ್ನಾಗಿ ಮಾಡಬೇಕಿದೆ. ಒಟ್ಟಾರೆ 1 ಸಾವಿರ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸಲಾಗುವುದು ಎಂದು ತಿಳಿಸಿದರು.
ಉದ್ಯೋಗಿಗಳು ಮತ್ತು ಉದ್ಯೋಗದಾತರ ಅಭಿವೃದ್ಧಿಗೆ ಮೂರು ಉದ್ಯೋಗ ಆಧರಿತ ಪ್ರೋತ್ಸಾಹ ಯೋಜನೆಗಳನ್ನು ಸಚಿವೆ ಪ್ರಕಟಿಸಿದ್ದಾರೆ. ಉದ್ಯೋಗದ ಮೊದಲ ನಾಲ್ಕು ವರ್ಷಗಳಲ್ಲಿ ಇಪಿಎಫ್‌ಒ ಕೊಡುಗೆಗೆ ಸಂಬಂಧಿಸಿದಂತೆ ನೇರವಾಗಿ ಉದ್ಯೋಗಿ ಮತ್ತು ಉದ್ಯೋಗದಾತರಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಹಣಕಾಸು ಪ್ರೋತ್ಸಾಹ ನೀಡಲಾಗುತ್ತದೆ. ಈ ಯೋಜನೆ 30 ಲಕ್ಷ ಯುವಕರು ಮತ್ತು ಅವರ ಉದ್ಯೋಗದಾತರಿಗೆ ಪ್ರಯೋಜನ ನೀಡಲಿದೆ. ಉದ್ಯೋಗಿಗಳು ಮತ್ತು ಉದ್ಯೋಗದಾತರನ್ನು ಉತ್ತೇಜಿಸಲು ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಇಪಿಎಫ್‌ಒ ಕೊಡುಗೆಗೆ ಸರ್ಕಾರ ಗಮನ ಹರಿಸಲಿದೆ ಎಂದರು.
ಮೊದಲ ಯೋಜನೆಯಲ್ಲಿ ಹೊಸ ಉದ್ಯೋಗಿಗಳಿಗೆ ಒಂದು ತಿಂಗಳ ವೇತನ, ಎರಡನೇ ಯೋಜನೆಯಲ್ಲಿ ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿ, ಮೂರನೇ ಯೋಜನೆಯಲ್ಲಿ ಉದ್ಯೋಗದಾತರಿಗೆ ಬೆಂಬಲ ನೀಡುವ ಕುರಿತು ಅವರು ಪ್ರಕಟಿಸಿದರು. ಎಲ್ಲಾ ಉದ್ಯಮಗಳಲ್ಲೂ ಮೊದಲ ಬಾರಿಗೆ ಉದ್ಯೋಗಿಗಳಿಗೆ ಒಂದು ಬಾರಿ ವೇತನ ಒದಗಿಸಲಾಗುವುದು. ನೇರ ಲಾಭ ವರ್ಗಾವಣೆಯ (ಡಿಬಿಟಿ) ಮೂಲಕ ಮೊದಲ ಬಾರಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.
ಇಂಟರ್ನ್ಶಿಪ್: ಮುಂದಿನ ಐದು ವರ್ಷ 500 ಕಂಪನಿಗಳಲ್ಲಿ ಒಂದು ಕೋಟಿ ಇಂಟರ್ನ್ಶಿಪ್ ಅವಕಾಶವನ್ನು ಸರ್ಕಾರದಿಂದ ಆರಂಭಿಸಲಾಗುವುದು. ಇದರಿಂದ ಇಂಟರ್ನ್ಗಳು ನೈಜ ಜೀವನದ ಪರಿಸ್ಥಿತಿಗೆ ತೆರೆದುಕೊಳ್ಳುವರು. ಈ ವೇಳೆ ಅವರಿಗೆ ಮಾಸಿಕ 5,000 ರೂ ಭತ್ಯೆ ನೀಡಲಾಗುವುದು. ಈ ಅವಧಿಯಲ್ಲಿ ಕಂಪನಿಗಳು ತರಬೇತಿ ಭರಿಸಬೇಕು. ಸಿಎಸ್ಆರ್ ನಿಧಿಯಿಂದ ಶೇ 10ರಷ್ಟು ತರಬೇತಿ ವೆಚ್ಚ ಭರಿಸಲಾಗುವುದು ಎಂದು ಬಜೆಟ್ನಲ್ಲಿ ಪ್ರಸ್ತಾಪಿಸಿದರು.
ಕಾರ್ಯನಿರತ ಮಹಿಳಾ ವಸತಿ ನಿಲಯ ಸ್ಥಾಪನೆ: ಉದ್ಯೋಗಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಮಹಿಳಾ ವಸತಿ ನಿಲಯಗಳನ್ನು ಸ್ಥಾಪಿಸಲಿದೆ. ಕೈಗಾರಿಕೆಗಳೊಂದಿಗಿನ ಸಹಯೋಗದೊಂದಿಗೆ ವೃತ್ತಿನಿರತ ಮಹಿಳೆಯರಿಗಾಗಿ ಮಹಿಳಾ ವಸತಿ ನಿಲಯಗಳನ್ನು ಸ್ಥಾಪಿಸಲಾಗುವುದು ಎಂದರು.
ಇದನ್ನೂ ಓದಿ: ಆಂಧ್ರಕ್ಕೆ ಬಜೆಟ್ ಜಾಕ್ಪಾಟ್! ಅಮರಾವತಿ ಅಭಿವೃದ್ಧಿಗೆ 15 ಸಾವಿರ ಕೋಟಿ ನೆರವು ಘೋಷಿಸಿದ ಕೇಂದ್ರ