ನವದೆಹಲಿ: ಗಡಿ ಭದ್ರತಾ ಪಡೆಯಲ್ಲಿ (ಬಿಎಸ್ಎಫ್) ಸ್ನೈಪರ್ ಆಗಬೇಕು ಎಂಬುದು ಸುಲಭದ ಸಂಗತಿಯಲ್ಲ. ಅದಕ್ಕೆ ಕಠಿಣ ತರಬೇತಿ, ನಿರ್ದಿಷ್ಟ ಗುರಿ ಮತ್ತು ಎದುರಾಳಿಗಳ ನಡೆ ಅರಿಯುವ ಚಾಕಚಕ್ಯತೆ ಬೇಕು. ಇಂಥ ಸವಾಲುಗಳನ್ನು ಎದುರಿಸಲು ಸಬ್ಇನ್ಸ್ಪೆಕ್ಟರ್ ಸುಮನ್ ಕುಮಾರಿ ಸಜ್ಜಾಗಿದ್ದಾರೆ. ಇದೀಗ ಇವರು ಬಿಎಸ್ಎಫ್ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದು, ಮೊದಲ ಮಹಿಳಾ ಸ್ನೈಪರ್ ಆಗಿ ಹೊರಹೊಮ್ಮಿದ್ದಾರೆ. ಇಂದೋರ್ನ ಸೆಂಟ್ರಲ್ ಆರ್ಮಮೆಂಟ್ ಮತ್ತು ಕಾಂಬ್ಯಾಟ್ ಸ್ಕಿಲ್ಸ್ ಸ್ಕೂಲ್ ಆಫ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್ನಲ್ಲಿ ಸುಮನಾ 8 ವಾರಗಳ ಕಠಿಣ ತರಬೇತಿ ಪೂರ್ಣಗೊಳಿಸಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿಯ ತುಂಗಲ್ ಕಣಿವೆಯ ನಿವಾಸಿ ಸುಮನ್ ಇನ್ಸ್ಟ್ರಕ್ಟರ್ ಗ್ರೇಡ್ ಕೂಡ ಪಡೆದಿದ್ದಾರೆ. ಸ್ನೈಪರ್ ತರಬೇತಿಯಲ್ಲಿ 56 ಪುರುಷರ ಜೊತೆಗೆ ಈ ತರಬೇತಿ ಪಡೆಯಲು ಮುಂದಾದ ಏಕೈಕ ದಿಟ್ಟ ಮಹಿಳೆ ಇವರು. 2019ರಲ್ಲಿ ಬಿಎಸ್ಎಫ್ಗೆ ಆಯ್ಕೆಗಾಗಿ ಪರೀಕ್ಷೆ ಬರೆದ ಸುಮನ್ 2021ರಲ್ಲಿ ಗಡಿ ರಕ್ಷಣಾ ಪಡೆ ಸೇವೆ ಸೇರಿದ್ದರು.
ಪಂಜಾಬ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುವಾಗ ಗಡಿಯಾಚೆಗಿನ ಸ್ನೈಪರ್ ದಾಳಿಯ ಅಪಾಯ ಅರಿತ ಸುಮನ್ ತಾವೂ ಕೂಡ ಸ್ನೈಪರ್ ಆಗುವ ನಿರ್ಧಾರ ಕೈಗೊಂಡರು. ಸ್ವಯಂಪ್ರೇರಣೆಯಿಂದ ಈ ಕೋರ್ಸಿಗೆ ಅರ್ಜಿ ಸಲ್ಲಿಸಿದ ಇವರ ಧೈರ್ಯ ಮೆಚ್ಚಿ ಹಿರಿಯ ಅಧಿಕಾರಿಗಳು ಕೂಡ ಅವಕಾಶ ನೀಡಿದ್ದರು.
ಸ್ನೈಪರ್ ಕೋರ್ಸ್ ಕಠಿಣ. ಇದಕ್ಕೆ ಮಾನಸಿಕ ಮತ್ತು ದೈಹಿಕವಾಗಿ ಸಾಕಷ್ಟು ಗಟ್ಟಿಯಾಗಿರಬೇಕು. ಶತ್ರುಗಳಿಗೆ ಕಾಣದಂತೆ ಮರೆಯಾಗಿ ಅವರ ಚಲನವಲನವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕು. ಇದಕ್ಕಾಗಿ ತರಬೇತಿ ನಡೆಸುವುದು ಅನೇಕ ಪುರುಷ ಅಭ್ಯರ್ಥಿಗಳಿಗೇ ಕಷ್ಟವಾಗುತ್ತದೆ. ಇದೇ ಕಾರಣಕ್ಕೆ ಅನೇಕರು ಈ ಕೋರ್ಸ್ ಸೇರಲು ಪ್ರಯತ್ನಿಸುವುದಿಲ್ಲ. ಆದರೆ, ಸುಮನಾ ಸ್ವಯಂಪ್ರೇರಣೆಯಿಂದ ಈ ಹುದ್ದೆ ಸೇರಿದ್ದಾರೆ.
ತರಬೇತಿ ಪಡೆದ ಸ್ನೈಪರ್ಗಳು ನಿರ್ದಿಷ್ಟ ದೂರದಲ್ಲಿ ನಿಖರ ಗುರಿ ಹೊಂದಿರುತ್ತಾರೆ. ಎಸ್ಎಸ್ಜಿ ಸೇರಿದಂತೆ ಹಲವು ಅತ್ಯಾಧುನಿಕ ಗನ್ ಬಳಕೆ ಮಾಡುತ್ತಾರೆ. ಕಷ್ಟಕರ ಪರಿಸ್ಥಿತಿಯಲ್ಲಿ ಶತ್ರುಗಳೆದುರು ತಮ್ಮನ್ನು ಮರೆಮಾಚುತ್ತಾ ಅವರ ಮೇಲೆ 3 ಕಿ.ಮೀ ದೂರದಿಂದಲೇ ನಿಖರವಾಗಿ ಗುರಿಹಿಡಿದು ಹೊಡೆದುರುಳಿಸಲು ವಿಶೇಷ ತರಬೇತಿ ಪಡೆದಿರುತ್ತಾರೆ.
ಸುಮನ್ ಸಾಮಾನ್ಯ ಕುಟುಂಬದಿಂದ ಬಂದವರಾಗಿದ್ದು, ತಂದೆ ದಿನೇಶ್ ಕುಮಾರ್ ಠಾಕೂರ್ ಎಲೆಕ್ಟ್ರಿಕಲ್ ಕಾಂಟ್ರಕ್ಟರ್ ಆಗಿದ್ದಾರೆ. ತಾಯಿ ಮಾಯಾ ದೇವಿ ಗೃಹಿಣಿ. ಆಕೆಯ ಸಹೋದರಿ ಸುಷ್ಮಾ ಠಾಕೂರ್ ವೈದ್ಯೆಯಾಗಿದ್ದರೆ, ಸಹೋದರೆ ವಿಕ್ರಾಂತ್ ಠಾಕೂರ್ ಬಿ.ಟೆಕ್ ಪದವೀಧರರು.
ಇದನ್ನೂ ಓದಿ: ಸಮುದ್ರದ ಅಲೆಗಳ ಎದುರು ಧೈರ್ಯವಾಗಿ ಮುನ್ನುಗುವ ದಿಟ್ಟೆ ಈಕೆ: ಹೈದರಾಬಾದ್ ಯುವತಿಯ ಸ್ಪೂರ್ತಿ ಕಥೆ ಇದು